ಮುಂಬೈ : ಬಾಂದ್ರಾ ರೈಲು ನಿಲ್ದಾಣದ ಒಂದನೇ ಪ್ಲಾಟ್ಫಾರ್ಮ್ನಲ್ಲಿ ಜನರ ನೂಕುನುಗ್ಗಲಿಂದಾಗಿ ಕಾಲ್ತುಳಿತ ಉಂಟಾಗಿದ್ದು, 9 ಮಂದಿ ಗಾಯಗೊಂಡ ಘಟನೆ ಇಂದು ಸಂಭವಿಸಿದೆ.
ಉತ್ತರ ಪ್ರದೇಶದ ಗೋರಖ್ಪುರಕ್ಕೆ ತೆರಳುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕರು ಯತ್ನಿಸಿದಾಗ ನೂಕುನುಗ್ಗಲು ಉಂಟಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. ಗಾಯಗೊಂಡ 9 ಮಂದಿಯ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 7 ಮಂದಿಯ ಆರೋಗ್ಯ ಸ್ಥಿರವಾಗಿದೆ. ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮುಂಬೈ ಮಹಾನಗರ ಪಾಲಿಕೆಯ ಮಾಹಿತಿ ಪ್ರಕಾರ, ಬಾಂದ್ರಾದಿಂದ ಗೋರಖ್ಪುರಕ್ಕೆ ಹೋಗುವ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 1 ರಲ್ಲಿ ಬಂದಿತ್ತು. ಈ ರೈಲಿಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದರು. ದೀಪಾವಳಿ ಆದ ಕಾರಣ ತಮ್ಮ ತಮ್ಮ ಊರುಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ಸ್ಟೇಷನ್ನಲ್ಲಿ ಜಮಾಯಿಸಿದ್ದರಿಂದ ಈ ಘಟನೆ ನಡೆದಿದೆ.
ಗಾಯಗೊಂಡವರನ್ನು ರೈಲ್ವೇ ಪೊಲೀಸ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಸ್ಟ್ರೆಚರ್ಗಳಲ್ಲಿ ಎತ್ತಿಕೊಂಡು ಸಾಗಿಸಿದ್ದಾರೆ. ಸದ್ಯ ರೈಲ್ವೆ ನಿಲ್ದಾಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಎಂಸಿ ತಿಳಿಸಿದೆ.