ಚಿತ್ರದುರ್ಗ ; ಮೂಡಾ, ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರುಪಯೋಗದಲ್ಲಿ ಸಿಲುಕಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ನಿಸ್ಪಕ್ಷಪಾತ ತನಿಖೆಗೆ ಸಹರಿಸುವಂತೆ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.
ಬಿಜೆಪಿ. ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಪ್ರದರ್ಶಿಸುವ ಬದಲು ರಾಜಿನಾಮೆ ನೀಡಿ ತಮ್ಮ ಮೇಲಿರುವ ಕಳಂಕವನ್ನು ನಿವಾರಿಸಿಕೊಳ್ಳಬೇಕು. ರಾಮಕೃಷ್ಣ ಹೆಗಡೆ ತಮ್ಮ ಮೇಲೆ ಟೆಲಿಫೋನ್ ಕದ್ದಾಲಿಕೆ ಅಪವಾದ ಬಂದಾಗ ದೆಹಲಿಯಲ್ಲಿದ್ದ ಅವರು ಕಚೇರಿಗೂ ಹೋಗದೆ ನೇರವಾಗಿ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.
ರೈಲು ಅಪಘಾತವಾದಾದ ಲಾಲ್ಬಹದ್ದೂರ್ಶಾಸ್ತ್ರಿ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಆದರ್ಶರೆನಿಸಿಕೊಂಡರು ಇವೆಲ್ಲವನ್ನು ಈಗಿನ ಮುಖ್ಯಮಂತ್ರಿ ಮರೆತಂತಿದೆ. ಮಾಹಿತಿ ಹಕ್ಕು ಕಾರ್ಯಕರ್ತರು ನಿರಂತರವಾಗಿ ನಡೆಸಿದ ಹೋರಾಟಕ್ಕೆ ಹೈಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ಆಪಾದನೆ ಬಂದಾಗ ಗೌರವದಿಂದ ರಾಜಿನಾಮೆ ಕೊಡುವುದು ಒಳ್ಳೆಯದು ಎಂದು ಹೇಳಿದರು.
ಮೂಡಾ, ವಾಲ್ಮೀಕಿ ಹಗರಣದಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ಖಜಾನೆಯಿಂದ ನೇರವಾಗಿ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ನವರೆ ತಮ್ಮ ಸ್ವಾರ್ಥಕ್ಕಾಗಿ ಬೇರೆಯವರನ್ನು ಸಿಲುಕಿಸಲು ಹೆಣೆದಿರುವ ಕಾಯಿದೆಯಲ್ಲಿ ಈಗ ಅವರೆ ಸಿಕ್ಕಿಬಿದ್ದಿದ್ದಾರೆ. ರಾಮಕೃಷ್ಣ ಹೆಗಡೆರವರ ಗರಡಿಯಲ್ಲಿ ಪಳಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡ ಮಾಡದೆ ರಾಜಿನಾಮೆ ಕೊಡುವುದು ಸೂಕ್ತ ಎಂದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹುಳುಕು ಮುಚ್ಚಿಕೊಳ್ಳಲು ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ. ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕೆಂಬ ಆಸೆಯಿದ್ದರೆ ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಹೈಕೋರ್ಟ್ ರಾಜ್ಯಪಾಲರ ನಡೆಯನ್ನು ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅರ್ಜಿ ವಜಾಗೊಳಿಸಿರುವುದರಿಂದ ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯಲು ನೈತಿಕತೆಯಿಲ್ಲ. ಹಗರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ. ಸದನದ ಒಳಗೆ ಹೊರಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಮೂಡಾ ಹಗರಣ ವಿರೋಧಿಸಿ ಬಿಜೆಪಿ. ಮೈಸೂರಿಗೆ ಪಾದಯಾತ್ರೆ ನಡೆಸಿದ್ದಕ್ಕೆ ವಿರುದ್ದವಾಗಿ ಮುಖ್ಯಮಂತ್ರಿ ಜನಾಂದೋಲಕ ನಡೆಸಿ ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸ ಮಾಡಿದರು. ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಸಿದ್ದರಾಮಯ್ಯನವರು ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಿದ್ದಾರೆ. ತಮ್ಮ ಮೇಲೆ ಭ್ರಷ್ಠಾಚಾರದ ಆರೋಪ ಬಂದಾಗಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಿತ್ತು. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ. ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.