ಮೈಸೂರು: ಮುಡಾ ಹಗರಣವನ್ನ ಸಿಬಿಐಗೆ ವಹಿಸುವುದಿಲ್ಲ. ಮುಡಾದಲ್ಲಿ 50:50 ರದ್ದಾಗಿದೆ. ನನ್ನ ಹೆಂಡತಿಯ ವಿಚಾರವನ್ನು ವಿವಾದ ಮಾಡುತ್ತಿದ್ದಾರೆ. ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ ಎಂದು ಮುಡಾ ಹಗರಣದ ಹೆಸರು ಹೇಳುತ್ತಿದಂತೆಯೇ ಸಿಎಂ ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದರು.
ಅವರು ಮೈಸೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ನಮ್ಮ ಜಮೀನಿನನ್ನು ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದರು. ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ. ಇದರಲ್ಲಿ ಯಾವ ವಿವಾದ ಇದೆ ಹೇಳಿ ಎಂದು ಹೇಳಿದರು.
ಮುಡಾ ಅಕ್ರಮದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತಪ್ಪಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾದರೆ ಎಲ್ಲರೂ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.ಪ್ರಕರಣ ಸಿಬಿಐಗೆ ವಹಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪೊಲೀಸರನೇ ಸಮರ್ಥರಿಲ್ಲವಾ? ಎಲ್ಲದಕ್ಕೂ ಸಿಬಿಐ ಸಿಬಿಐ ಅನ್ನುವ ಬಿಜೆಪಿ ತಮ್ಮ ಅವಧಿಯಲ್ಲಿ ಎಷ್ಟು ಕೇಸ್ಗಳನ್ನು ಸಿಬಿಐಗೆ ಕೊಟ್ಟಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು. ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ ಎಂದು ಸಿಎಂ ಸ್ಪಷ್ಟವಾಗಿ ನಿರಾಕರಿಸಿದರು.
ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಇಡಿ ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಾರೆ. ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ಇಡಿ ದಾಳಿ ಮಾಡಲಿ, ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.