ಬೆಂಗಳೂರು : ಮುಡಾದಲ್ಲಿ ನಡೆದಿರುವಂತಹ ಅಕ್ರಮ ಸೈಟ್ ಹಂಚಿಕೆ ವಿಚಾರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದಕ್ಕೆ , ರಾಜ್ಯಪಾಲರು ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಿದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕನ್ನಡ ಹೋರಾಟಗಾರ ವಾಟಾಳ ನಾಗರಾಜ್ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಇಂತಹ ನಡೆ ಸರಿಯಲ್ಲ. ಜೈಲಿಗೆ ಹೋಗಬೇಕಾದವರು ಎಲಾ ಪಕ್ಷಗಳಲ್ಲಿಯೂ ಇದ್ದಾರೆ. ಆಡಳಿತ ಪಕ್ಷದಲ್ಲಿ ಮಾತ್ರವಲ್ಲ, ವಿಪಕ್ಷಗಳಲ್ಲಿಯೂ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ನೋಟೀಸ್ ನೀಡುವ ಮೂಲಕ ರಾಜಕೀಯವಾಗಿ ನಡೆದುಕೊಂಡಿದ್ದಾರೆ.ಹಾಗಾಗಿ ರಾಜ್ಯಪಾಲರು ತಮ್ಮ ನಡೆಯನ್ನು ಇನ್ನೆರಡು ದಿನಗಳೊಳಗಾಗಿ ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಪಾಲರ ಕ್ರಮ ಖಂಡಿಸಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
				
															
                    
                    
                    
                    
                    































