ದುಶಾನ್ಬೆ: ಮುಸ್ಲಿಂ ರಾಷ್ಟ್ರವಾದ ತಜಕಿಸ್ಥಾನದಲ್ಲಿ ಶೀಘ್ರವೇ ಹಿಜಾಬ್ ನಿಷೇಧದ ಕಾನೂನು ಜಾರಿಯಾಗಲಿದೆ. ಅಲ್ಲಿನ ಸಂಸತ್ತು ಈ ಕುರಿತ ಮಸೂದೆಯನ್ನು ಇತ್ತೀಚೆಗೆ ಅಂಗೀಕರಿಸಿದೆ. ಈ ಮೂಲಕ 2007ರಿಂದಲೂ ಚರ್ಚೆಯಲ್ಲಿದ್ದ ವಿವಾದಕ್ಕೆ ಶೀಘ್ರವೇ ತೆರೆ ಬೀಳಲಿದೆ. ಸಂಸತ್ತಿನ ಮೇಲ್ಮನೆಯಾದ ಮಜಿಲಿ ಮಿಲ್ಲಿಯಲ್ಲಿ ಸ್ಪೀಕರ್ ರುಸ್ತುಮ್ ಎಮೋಮಲಿ ಅಧ್ಯಕ್ಷತೆಯಲ್ಲಿ ನಡೆದ 18ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧ ಕುರಿತಾದ ಮಸೂದೆಯನ್ನು ಅಂಗೀಕರಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಹಿಜಾಬ್ ಧರಿಸಿದರೆ ಅದಕ್ಕೆ ಭಾರೀ ದಂಡವನ್ನು ವಿಧಿಸುವ ಬಗ್ಗೆ ಮಸೂದೆ ಪ್ರಸ್ತಾಪಿಸಿದೆ. ಅಲ್ಲದೆ ಮಕ್ಕಳ ಶಿಕ್ಷಣ ಹಾಗೂ ರಕ್ಷಣೆಯ ಹಿತದೃಷ್ಟಿಯಿಂದ ಮುಸ್ಲಿಂ ಹಬ್ಬಗಳಾದ ಈದ್ ಉಲ್ ಫಿತರ್ (ರಮ್ಜಾನ್) ಹಾಗೂ ಈದ್ ಅಲ್ ಅಧಾ (ಬಕ್ರೀದ್) ಹಬ್ಬಗಳಲ್ಲಿ ಮಕ್ಕಳು ಭಾಗಿಯಾಗುವುದಕ್ಕೂ ಮಸೂದೆ ನಿರ್ಬಂಧ ವಿಧಿಸಿದ್ದು, ಅದಕ್ಕೂ ಅನುಮೋದನೆ ದೊರೆತಿದೆ. ಈ ಮಸೂದೆಗೆ ಮೇ 8ರಂದು ಸಂಸತ್ತಿನ ಕೆಳಮನೆ ಮಜಿಸಿ ನಮೋ ಯಂಡಗೋನ್ನಲ್ಲಿ ಅನುಮೋದನೆ ದೊರೆತಿತ್ತು. ಮಸೂದೆಯಲ್ಲಿ ಹಿಜಾಬ್ ಅನ್ನು “ಅನ್ಯಗ್ರಹ ಜೀವಿಗಳ ಉಡುಗೆ’ ಎಂದೇ ಉಲ್ಲೇಖೀಸಲಾಗಿದೆ.
