ರಾಜ್ಯದಲ್ಲಿ ಹೃದಯಾವಿದ್ರಾವಕ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಮೂವರು ಮಕ್ಕಳನ್ನು ಸ್ವತಃ ತಾಯಿಯೇ ನೇಣು ಬಿಗಿದು ಕೊಲೆಗೈದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ನಡೆದಿದೆ.
ರೂಪಾ ಹನುಮಂತಗೌಡರ (27) ಎಂಬ ಮಹಿಳೆ ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ಜಂತಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಮಕ್ಕಳ ಪ್ರಾಣ ಹೋದ ನಂತರ ತಾನೂ ಸಾಯಬೇಕೆಂಬ ನಿರ್ಧಾರದಿಂದ ರೂಪಾ ಅವರು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರೂಪಾ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ಕಲಹದಿಂದ ಮಹಿಳೆ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

































