ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರಣಾಂತಿಕ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 7165 ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. 301 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 159 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಒಂದು ವರ್ಷದೊಳಗಿನ 3 ಮಕ್ಕಳಲ್ಲಿ ಈ ಮಹಾಮಾರಿ ಪತ್ತೆಯಾಗಿದೆ.
ಹಾಸನ ಜಿಲ್ಲೆಯಲ್ಲಿ ಇದುವರೆಗೆ ಅತಿ ಹೆಚ್ಚು ಮಕ್ಕಳು ಬಲಿಯಾಗಿದ್ದರೆ ಇದೀಗ ಗದಗದಲ್ಲಿ 5 ವರ್ಷದ ಮಗು ಚಿರಾಯಿ ಹೊಸಮನಿ ಮೃತಪಟ್ಟಿದ್ದಾನೆ. ಇಲ್ಲಿಯವರೆಗೂ ಒಂದು ವರ್ಷದೊಳಗಿನ 135 ಮಕ್ಕಳಲ್ಲಿ ಡೆಂಗ್ಯೂ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 48 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದ್ದು, ಒಂದು ವರ್ಷದಿಂದ 18 ವರ್ಷದೊಳಗಿನ 2496 ಮಂದಿಯಲ್ಲಿ ಡೆಂಘಿಇದ್ದು, ಮತ್ತು 18 ವರ್ಷ ಮೇಲ್ಪಟ್ಟ 4534 ಮಂದಿಗೆ ಡೆಂಗ್ಯೂ ಪತ್ತೆಯಾಗಿದೆ. ಕುಡಿಯುವ ನೀರು, ಟ್ಯಾಂಕ್ ಗಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.