ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ಮಾತ್ರ ತಿಂದು ಬಿಳಿಯ ಭಾಗವನ್ನು ಬಿಸಾಡುವುದು ರೂಢಿ. ಆದರೆ ಆ ಕೆಂಪು ಭಾಗದ ತಿರುಳನ್ನು ಕಟ್ ಮಾಡಿ ಉಳಿದಿರುವ ಬಿಳಿಯ ಭಾಗದಿಂದ ದೋಸೆಯನ್ನು ಮಾಡಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು
ಕಲ್ಲಂಗಡಿ ಸಿಪ್ಪೆ : 2 ಕಪ್ (ಸಿಪ್ಪೆಯ ಒಳಭಾಗವನ್ನು ಹೆಚ್ಚಿಕೊಳ್ಳಬೇಕು)
ಅಕ್ಕಿ : 2 ಕಪ್
ಅವಲಕ್ಕಿ : 1 ಕಪ್
ಮೆಂತ್ಯ : 1/4 ಕಪ್
ಉದ್ದಿನಬೇಳೆ : 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲು ಅಕ್ಕಿ, ಅವಲಕ್ಕಿ, ಮೆಂತ್ಯ, ಉದ್ದಿನಬೇಳೆ ಎಲ್ಲವನ್ನೂ ತೊಳೆದು ಒಟ್ಟಿಗೆ ಸೇರಿಸಿ 4 ರಿಂದ 5 ಗಂಟೆಗಳ ಕಾಲ ನೆನಸಿಡಬೇಕು. ನಂತರ ಹೆಚ್ಚಿಕೊಂಡ ಕಲ್ಲಂಗಡಿ ಜೊತೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಬೇಕು.
ನಂತರ ಎರಡು ಮಿಶ್ರಣವನ್ನು ಕಲಸಿ 7 ರಿಂದ 8 ಗಂಟೆಗಳ ಕಾಲ ಅಥವಾ ರಾತ್ರಿ ರುಬ್ಬಿ ಬೆಳಿಗ್ಗೆಗೆ ದೋಸೆ ಮಾಡಬಹುದು. ಅದರ ಮುನ್ನ ಸ್ವಲ್ಪ ಉಪ್ಪನ್ನು ಸೇರಿಸಬೇಕು.
ದೋಸಾ ತವಕ್ಕೆ ಎಣ್ಣೆ ಸವರಿ ಚೆನ್ನಾಗಿ ಕಾಯಿಸಿ ತೆಳ್ಳಗೆ ದೋಸೆ ಮಾಡಿ ಮುಚ್ಚಿ ಬೇಯಿಸಬೇಕು. ಈಗ ಗರಿಗರಿಯಾದ ಕಲ್ಲಂಗಡಿ ಸಿಪ್ಪೆಯ ದೋಸೆ ಸವಿಯಲು ಸಿದ್ಧ.
ಈ ದೋಸೆಯನ್ನು ಕಾಯಿ ಚಟ್ನಿಯ ಜೊತೆ ಸವಿಯಬಹುದು. ಮತ್ತು ದೋಸೆ ಮಾಡುವಾಗ ಎಣ್ಣೆಯ ಬದಲು ತುಪ್ಪವನ್ನೂ ಸಹ ಹಾಕಿಕೊಳ್ಳಬಹುದು.