ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿದೆ. ಹಣ ನೀಡಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 15 ದಿನಗಳಿಂದ ಭಾರಿ ಗಾಳಿ ಮಳೆ ಬೀಸುತ್ತಿದೆ. ಮೂರ್ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ಕೊಂಚ ಕಡಿಮೆಯಾಗಿದ್ದ ಮಳೆ ಕಳೆದ ರಾತ್ರಿಯಿಂದ ಮತ್ತೆ ಸುರಿಯುತ್ತಿದೆ.
ಭಾರೀ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ಮಲೆನಾಡಿನ ಕೆಲ ಗ್ರಾಮಗಳ ಜನರು ಕತ್ತಲಲ್ಲಿ ಕಳೆಯುವಂತಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೊಬೈಲ್ ಚಾರ್ಜ್ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಇದನ್ನೇ ಬಂಡವಾಳವಾಗಿ ಇಟ್ಟುಕೂಂಡ ಅಂಗಡಿಯೊಂದರಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜ್ ಮಾಡಿಕೊಡುತ್ತಿದ್ದಾರೆ. ಒಂದು ಮೊಬೈಲ್ ಫುಲ್ ಚಾರ್ಜ್ ಮಾಡಲು 60 ರೂ. ಹಾಗೂ ಹಾಲ್ಫ್ ಚಾರ್ಜ್ ಮಾಡಲು 40 ರೂ. ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
				
															
                    
                    
                    
                    
                    
































