ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು

WhatsApp
Telegram
Facebook
Twitter
LinkedIn

 

ಚಿತ್ರದುರ್ಗ:        ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು.  ಇಂತಹ ಮಹಾನ್ ಯೋಗಿಗಳ ಆಗಸ್ಟ್ 01 ರ ಜನ್ಮ ದಿನವನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ.

ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆಗಸ್ಟ್ 1, 1930 ರಲ್ಲಿ ಜನಿಸಿದ ಡಾ.ಮಹಾಂತ ಶಿವಯೋಗಿಗಳು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು.

ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿದರು. ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಬಂದ ಕಾರಣ ಕಾಶಿಯಿಂದ ಆಗಮಿಸಿ, ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ಮಾಡಿದ್ದು ಮಾತ್ರವಲ್ಲದೇ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು.  1970 ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಕಾರಿಯಾಗಿ ನಂತರ 2018 ರ ವರೆಗೆ ಅಖಂಡ 48 ವರ್ಷಗಳ ಕಾಲ ಅವರ ಸಾಧನೆ ಅಪಾರವಾದುದು.

ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.

ಪ್ರಮುಖವಾಗಿ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ 1975 ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು, ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು, ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.

ಬಟ್ಟೆಯ ಚೀಲದ ಜೋಳಿಗೆ ಹಿಡಿದು, ಕುಡಿತದ ಚಟದಿಂದ ನಿಧನನಾದ ಪರಿಶಿಷ್ಟ ಜಾತಿಯ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು.

ದುರ್ವಸನಿಗಳು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.

ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆAಡ್ ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ-ಕುಟುಂಬ-ಸಮಾಜ-ಗ್ರಾಮಗಳ ನಿರ್ಮಾಣ ಮಾಡುವ ಜೊತೆಗೆ ತಮ್ಮ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಮಾಡಿಸುವ ಮೂಲಕ ವ್ಯಸನಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು-ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.

ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1 ನ್ನು ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.

ಆಗಸ್ಟ್ 01 ರಂದು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರನ್ನು ಒಗ್ಗೂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವ ವಚನ ಪ್ರಮಾಣ ಹಾಗೂ ಜಯಂತಿ ಕಾರ್ಯಕ್ರಮ ಜಾಥಾ ಆಯೋಜಿಸಿ ಶ್ರೀಗಳ ಜಯಂತಿ ಆಚರಿಸಲಾಗುತ್ತಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon