ಬೆಂಗಳೂರು: ಕೇಂದ್ರದ ನೂತನ ಎನ್ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹಾಗೂ ಬಳ್ಳಾರಿ ಸಂಸದ. ಇ.ತುಕಾರಾಂ ಅವರುಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಳ್ಳಾರಿಯಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿದ್ದ ಕಾಂಗ್ರೆಸ್ ಸಂಸದ ಇ.ತುಕಾರಾಂ ಅವರು, ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಮರಳಿ ರಾಜೀನಾಮೆ ನೀಡಿದ್ದು, ವಿಧಾನಸಭಾಧ್ಯಕ್ಷರ ಅನುಮತಿ ಮೇರೆಗೆ ನಿನ್ನೆಯೇ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ತುಕಾರಾಂ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಶುಕ್ರವಾರ ಆಗಮಿಸಿದ್ದ ಕುಮಾರಸ್ವಾಮಿ, ಪ್ರಧಾನಿ ಮೋದಿ ಸಂಪುಟದಲ್ಲಿ ಮಹತ್ವದ ಖಾತೆ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು.