ಶಿವಮೊಗ್ಗ: ಮೂತ್ರ ವಿಸರ್ಜನೆಗೆ ನಿಂತಿದ್ದಾಗ ವಿದ್ಯುತ್ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕಾರ್ತಿಕ್ ಎಸ್ (19) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಇಂದು ಮುಂಜಾನೆ ಮನೆ ಮುಂಭಾಗದಲ್ಲಿರುವ IBX ತಂತಿ ಬೇಲಿ ಬಳಿ ಮೂತ್ರ ವಿಸರ್ಜನೆ ಮಾಡುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಬೇಲಿಯ ಮೇಲೆ ಬಿದ್ದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರಾದರೂ ಯೋಜನವಾಗಿಲ್ಲ. ಮನೆ ಮುಂಭಾಗದ ಬೇಲಿಯ ಮೇಲೆ ವಿದ್ಯುತ್ ವೈರ್ ತುಂಡಾಗಿ ಬಿದ್ದಿದ್ದು, ಹೀಗಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಕಾರ್ತಿಕ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಬಿಎ ವ್ಯಾಸಾಂಗ ಮಾಡುತ್ತಿದ್ದ. ಈ ಸಂಬಂಧ ರಿಪ್ಪನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
