ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೊಂಬಾಟ್ ರಿಸಲ್ಟ್ ಬರುವ ನಿರೀಕ್ಷೆ ದಟ್ಟವಾಗಿದೆ. ಏಪ್ರಿಲ್ 26 ಮತ್ತು ಮೇ.7 ಸೇರಿದಂತೆ ರಾಜ್ಯದಲ್ಲಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಯಾವ ಪಕ್ಷಕ್ಕೆ ಎಷ್ಟು ಗೆಲುವು ದೊರೆಯಬಹುದು? ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗಿದ್ದ ಆಂತರಿಕ ಸಮೀಕ್ಷಾ ವರದಿ ಇದೀಗ ಸಿಎಂ ಮತ್ತು ಡಿಸಿಎಂ ಅವರ ಕೈ ಸೇರಿದ್ದು, ಕೈ ಪಾಳಯದವರಿಗೆ ಖುಷಿ ಸಮಾಚಾರ ಕಾದಿದೆ. ಈ ಸಲದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದರ ಪರಿಣಾಮ ಮತಗಳ ಧೃವೀಕರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತುಸು ಹಿನ್ನಡೆಯಾಗಬಹುದೆಂಬ ಆತಂತ ಇದೀಗ ಈ ವರದಿಯಿಂದ ದೂರವಾದಂತಾಗಿದೆ. ಏಕೆಂದರೆ ಬಿಜೆಪಿಯವರ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸೀಟ್ ಗಳನ್ನು ಗೆಲ್ಲುತ್ತೇವೆಂಬ ಲೆಕ್ಕಾಚಾರ ಬುಡಮೇಲಾದಂತಾಗಿದೆ. ಮೂಲಗಳ ಪ್ರಕಾರ, ಈ ಬಾರಿ ಕಾಂಗ್ರೆಸ್ ಮೊದಲ ಹಂತದ ಹದಿನಾಲ್ಕು ಕ್ಷೇತ್ರಗಳಲ್ಲಿ 6 ಸೀಟ್ ಗಳು ಹಾಗೂ ಎರಡನೇ ಹಂತದ ಹದಿನಾಲ್ಕು ಕ್ಷೇತ್ರಗಳ ಪೈಕಿ 8 ಸೀಟುಗಳು ಸೇರಿದಂತೆ ಒಟ್ಟು 14 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ದುಂಧುಬಿ ಮೊಳಗಿಸಲಿದ್ದಾರೆ ಎನ್ನುವುದು ಇದೀಗ ಬಹಿರಂಗವಾಗಿದೆ. ಇದೇ ಕಾರಣಕ್ಕೋ ಏನೋ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಫಲಿತಾಂಶದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಲೆದಂಡ ಖಚಿತ ಎಂದು ಮಾರ್ಮಿಕವಾಗಿ ಹೇಳಿದ್ದರು.
