ನವದೆಹಲಿ: ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ಇಂದು ನಡೆಸಿದೆ. ಈ ವಿಚಾರಣೆಯಲ್ಲಿ ಮುಂದಿನ ಆದೇಶದವರೆಗೆ ಸಿದ್ದರಾಮಯ್ಯ ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ನ ಈ ಆದೇಶದಿಂದಾಗಿ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತುಸು ರಿಲೀಫ್ ದೊರೆತಿದೆ. ಆದರೆ 6 ವಾರಗಳೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. 2022ರ ಪ್ರತಿಭಟನೆ ವಿಚಾರದಲ್ಲಿ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ತಿರಸ್ಕರಿಸಿದ ರಾಜ್ಯ ಹೈಕೋರ್ಟ್ ಆದೇಶದ ವಿರುದ್ಧ ಸಿಎಂ ಸಿದ್ಧರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಅರ್ಜಿ ಸಲ್ಲಿಸಿದ್ದರು.
ರಸ್ತೆ ತಡೆದು ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಎಫ್ಐಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಕೆಲ ದಿನಗಳ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿರುವುದನ್ನು ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿದೆ.