ಚಿತ್ರದುರ್ಗ : ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಆಯೋಗ ರಚಿಸುವ ನಾಟಕವಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಎಂ.ಶಿವಮೂರ್ತಿ ಚಳ್ಳಕೆರೆ ಹೇಳಿದರು.
ಒಂದೊಂದು ಕಡೆ ಒಂದೊಂದು ರೀತಿಯ ವಿಭಿನ್ನ ಹೇಳಿಕೆಗಳನ್ನು ನೀಡುತ್ತ ಮಾದಿಗರನ್ನು ನಿರ್ಲಕ್ಷಿಸುವ ಬದಲು ಮೊದಲು ಒಳ ಮೀಸಲಾತಿ ಜಾರಿಗೆ ತರಲಿ. ಇಲ್ಲವಾದಲ್ಲಿ ಅಹಿತಕರ ಹೋರಾಟಕ್ಕೂ ಮಾದಿಗರು ಸಿದ್ದರಿದ್ದೇವೆ. ದತ್ತಾಂಶ, ಡಾಟ ಗೊತ್ತಿಲ್ಲದವರಂತೆ ನಾಟಕವಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಆಯೋಗದ ಮೇಲೊಂದು ಆಯೋಗ ರಚಿಸುವುದಾಗಿ ಹೇಳಿ ನಮ್ಮ ಕಿವಿಗೆ ಹೂವು ಮುಡಿಸುವುದು ಬೇಡ ಎಂದು ಎಚ್ಚರಿಸಿದರು.
ವಿಧಾನಸಭೆ ಉಪ ಚುನಾವಣೆ ನೆಪ ಹೇಳುತ್ತ ಒಳ ಮೀಸಲಾತಿ ಜಾರಿಗೆ ತರುವುದನ್ನು ವಿಳಂಭ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಶಿವಮೂರ್ತಿ ಆಂಧ್ರ ಮಾದರಿಯಲ್ಲಿ ಹೋರಾಟಕ್ಕಿಳಿದು ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಾಗಿ ಕಿಡಿ ಕಾರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್, ಎಸ್ಸಿ.ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಗೂಳಿಹಟ್ಟಿ , ಬಿಜೆಪಿ. ಎಸ್ಸಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ , ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮರಿಪಾಲಯ್ಯ, ಡಿ.ಓ.ಮುರಾರ್ಜಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಕರಸ್ವಾಮಿ, ಡಿ.ತಿಪ್ಪೇಸ್ವಾಮಿ, ಸಿದ್ದಾರ್ಥ ವಿ. ನವೀನ್ ನಾಯಕ, ಚನ್ನಗಾನಹಳ್ಳಿ ಮಲ್ಲೇಶ್, ಕರಿಕೆರೆ ತಿಪ್ಪೇಸ್ವಾಮಿ, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.