ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದು, ಜನರು ಜಾಗೃತಿವಹಿಸುವಂತೆ ಕರೆ ನೀಡಿದ್ದಾರೆ.
115ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಮುಖವಾಗಿ ಸೈಬರ್ ವಂಚನೆ ಪ್ರಕರಣ ಪ್ರಸ್ತಾಪಿಸಿದರು. ಸೈಬರ್ ವಂಚಕರು ಹೇಗೆಲ್ಲ ಸುಳ್ಳು ಹೇಳಿ ವಂಚಿಸುತ್ತಾರೆ ಎಂಬುದಕ್ಕೆ ವಿಜಯಪುರದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮುಂಬೈ ಪೊಲೀಸ್ ಅಥವಾ ಯಾವುದೇ ತನಿಖಾ ಸಂಸ್ಥೆ ಹೆಸರಲ್ಲಿ ಕರೆ ಮಾಡಿ ಆಧಾರ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ. ನೀವು ಕೊಡದೇ ಇದ್ದಾಗ ನಿಮ್ಮನ್ನು ಅವರು ಅರೆಸ್ಟ್ ಮಾಡುತ್ತೇವೆ ನೀವು ‘ಡಿಜಿಟಲ್ ಅರೆಸ್ಟ್’ ಆಗಿದ್ದೀರಾ ಎಂದು ಬೆದರಿಸಬಹುದು. ಆದರೆ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ವ್ಯವಸ್ಥೆಯೇ ಇಲ್ಲ ಎಂಬ ಬಗ್ಗೆ ಅರಿವಿರಲಿ ಎಂದು ಹೇಳಿದ್ದಾರೆ.
ಸೈಬರ್ ವಂಚಕರು ಪೊಲೀಸರು, ಆರ್ ಬಿಐ ಅಧಿಕಾರಿಗಳು, ಸಿಬಿಐ, ನಾರ್ಕೊಟಿಕ್ಸ್ ಅಧಿಕಾರಿಗಳ ಹೆಸರಲ್ಲಿ ನಿಮಗೆ ಕರೆ ಮಾಡಬಹುದು. ಈ ರೀತಿ ಕರೆಗಳು ಬಂದಾಗ ಗಾಬರಿಯಾಗದೇ ಹುಷಾರಾಗಿರಿ. ಯಾವುದೇ ತನಿಖಾ ಏಜೆನ್ಸಿಯವರು ಫೋನ್ ಕರೆ, ವಿಡಿಯೋ ಕಾಲ್ ಮಾಡುವುದಿಲ್ಲ ಎಂಬುದು ಗಮನದಲ್ಲಿರಲಿ. ಅಂತಹ ಕರೆಗಳು ಬಂದರೆ ಸಾಧ್ಯವಾದರೆ ರೆಕಾರ್ಡ್ ಮಾಡಿ. ಸೈಬರ್ ಠಾಣೆಗೆ ದೂರು ನೀಡಿ ಎಂದಿದ್ದಾರೆ.
ಆನ್ ಲೈನ್ ವಂಚನೆ ಕರೆಗಳು ಬಂದರೆ ತಕ್ಷಣ ಸೈಬರ್ ಕ್ರೈಂ ಹೆಲ್ಪ್ ಲೈನ್ ಸಂಖ್ಯೆ 1930 ಹಾಗೂ cybercrime.gov.in ವೆಬ್ ಸೈಟ್ ಗೆ ದೂರು ನೀಡಿ. ಜೊತೆಗೆ #SaveDigitalindia ಅನ್ನೋ ಹ್ಯಾಷ್ ಟ್ಯಾಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದ್ದಾರೆ.