ಚಿತ್ರದುರ್ಗ : ನಾವೆಲ್ಲಾ ಹಿಂದೂ ಒಗ್ಗಟ್ಟಾಗಿ ಇರಬೇಕಿದೆ. ಬಿಡಿ ಬಿಡಿಯಾದರೆ ಬಲವಿಲ್ಲ, ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾವೆಲ್ಲಾ ಸಂಘಟನೆಯಾಗಬೇಕಿದೆ ಎಂದು ಭಂಜರಂಗ ದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಕರೆ ನೀಡಿದ್ದಾರೆ.
ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ವತಿಯಿಂದ ನಡೆಯುತ್ತಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯ ಅಂಗವಾಗಿ ಗಣಪತಿಗೆ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಮಾನದಲ್ಲಿ ಹಿಂದೂ ಸಮಾಜವನ್ನು ಪಡೆಯುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ತಕ್ಕ ಉತ್ತರವನ್ನು ನಾವುಗಳು ನೀಡಬೇಕಿದೆ. ಹಿಂದೂ ಸಾಮ್ರಾಜ್ಯ ಪುರಾತನವಾದ ಸಾಮ್ರಾಜ್ಯವಾಗಿದೆ, ಇದಕ್ಕೆ ತನ್ನದೆ ಆದ ಇತಿಹಾಸ ಇದೆ ಇದನ್ನು ನಾವುಗಳು ಮರೆಯಬಾರದು, ಭಾರತದಲ್ಲಿ ಹಿಂದುಗಳಿಗೆ ಮಾನ್ಯತೆ ದೂರೆಯಬೇಕಿದೆ, ನಮ್ಮನ್ನಾಳಿದ ಶ್ರೀರಾಮನ ದೇವಾಲಯವನ್ನು ಆಯೋದ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ನಮ್ಮ ಹೆಮ್ಮೆಯ ಸಂಕೇತವಾಗಿದೆ ಎಂದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿಯ ಈ ಶೋಭಾಯಾತ್ರೆ ಅತಿ ದೊಡ್ಡದಾದ ಶೋಭಾಯಾತ್ರೆಯಾಗಿದೆ ಇದು ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳ ಉತ್ತಮವಾದ ಕಾರ್ಯವನ್ನು ಮಾಡಿದೆ. ಇಷ್ಟೊಂದು ಜನತೆಯನ್ನು ಸೇರಿಸುವುದರ ಮೂಲಕ ಅತಿ ದೊಡ್ಡದಾದ ಕಾರ್ಯವನ್ನು ಮಾಡಿದೆ. ಇದು ಇದೇ ರೀತಿ ಮುಂದುವರೆಯಬೇಕಿದೆ. ಇಲ್ಲಿ ಮಠಗಳು ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಎಲ್ಲಾ ಮಠಾಧೀಶರ ಆರ್ಶೀವಾದ ನಮ್ಮೆಲ್ಲರ ಮೇಲಿದೆ, ಇದರಿಂದ ನಮ್ಮ ಸನಾತನ ಧರ್ಮ ಗಟ್ಟಿಯಾಗಿ ನಿಂತಿದೆ ಎಂದರು.
ಈ ಸಂದರ್ಭದಲ್ಲಿ ಶಾಂತವೀರ ಶ್ರೀಗಳು, ಶಿವಲಿಂಗಾನಂದ ಶ್ರೀಗಳು, ಪುರುಷೋತ್ತಮಾನಂದ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಮಾದಾರ ಚನ್ನಯ್ಯಶ್ರೀಗಳು, ಮಡಿವಾಳ ಶ್ರೀಗಳು, ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಕೆ.ಸಿ.ವಿರೇಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸವಿತಾ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಷಡಾಕ್ಷರಪ್ಪ, ಆಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿಗಳಾದ ಕಾರ್ತಿಕ್, 2024ರ ಹಿಂದೂ ಮಹಾ ಗಣಪತಿ ಸಮಿತಿಯ ಅಧ್ಯಕ್ಷರಾದ ನಯನ ಮಾರ್ಗದರ್ಶಕರಾದ ಬದರಿನಾಥ್, ಕೇಶವ್, ಪ್ರಭಂಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೇ ನಗರದ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಝಗ ಮಗಿಸುತ್ತಿರುವ ವೈವಿಧ್ಯಮಯ ವಿದ್ಯುತ್ ದೀಪಗಳು ಹಾಗೂ ಸಂಪೂರ್ಣ ಕೇಸರಿಯನ್ನೇ ಕೋಟೆನಗರಿ ಹೊದ್ದುಕೊಂಡು, ಭಕ್ತರನ್ನು ಕೈ ಬೀಸಿ ಕರೆದಿದ್ದು ಸುಮಾರು 3 ಲಕ್ಷ ಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಹಿಂದೂ ಮಹಾಗಣಪನಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಓಂ ಶ್ರೀ ಆಂಜನೇಯ ಸ್ವಾಮಿ ಭಾವಚಿತ್ರದ ಬೃಹತ್ ಧ್ವಜಗಳು ಮತ್ತು ಗಾಂಧಿ ವೃತ್ತದಲ್ಲಿ ಸುಮಾರು 20 ಅಡಿ ಮೇಲ್ಬಾಗದಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿ ಜನರ ಗಮನ ಸೆಳೆಯುತ್ತಿತ್ತು
ಈ ಸಂದರ್ಭದಲ್ಲಿ ಗಣಪತಿಯ ಮುಕ್ತಿ ಭಾವುಟವನ್ನು ಹರಾಜು ಹಾಕಿದ್ದು ಇದನ್ನು 2.05 ಲಕ್ಷಕ್ಕೆ ಹನುಮನಹಳ್ಳಿ ಮಂಜುನಾಥ್, ಗಣಪತಿಯ ಹೂವಿನಹಾರವನ್ನು 1.60 ಲಕ್ಷ ರೂಗಳಿಗೆ ತೊರೇಮನಹಳ್ಳಿ ತಿಪ್ಪೇಸ್ವಾಮಿ, ಗಣಪತಿಗೆ ಹಾಕಿದ ನೋಟಿನ ಹಾರವನ್ನು 2.50 ಲಕ್ಷ ರೂ.ಗಳಿಗೆ ಕೆ.ಜಿ.ಟಿ.ಗುರುಮೂರ್ತಿ, ಪುರಿ ಜಗನ್ನಾಥ್ ದೇವಾಲಯದ ಮಾದರಿಯನ್ನು 2.25 ಲಕ್ಷ ರೂ.ಗಳಿಗೆ ಕೆ.ಸಿ.ನಾಗರಾಜ್, ಹಣ್ಣಿನ ಪುಟ್ಟಿಯನ್ನು 60 ಸಾವಿರ ರೂಗಳಿಗೆ ಉಮೇಶ್ ಕಾರಜೋಳ, ಗಣಪತಿಯ ಪ್ರಸಾದ ಲಡ್ಡು 70 ಸಾವಿರ ರೂಗಳಿಗೆ ಶ್ಯಾಮಿಯಾನ ಮೋಹನ್, ಗಣಪತಿಯ ಭಾವಚಿತ್ರವನ್ನು 60 ಸಾವಿರ ರೂಗಳಿಗೆ ಮಂಜಣ್ಣ ಹಾಗೂ ಮೆಕ್ಕೆಜೋಳದ ಹಾರವನ್ನು 40 ಸಾವಿರ ರೂಗಳಿಗೆ ವಿಶ್ವಬಂಧು ಕೊಟ್ರೇಶ್ ರವರು ಬಹಿರಂಗ ಹರಾಜಿನಲ್ಲಿ ಪಡೆದಿದ್ದಾರೆ.
ನಂತರ ನಡೆದ ಶೋಭಾಯಾತ್ರೆಯಲ್ಲಿ ಚಿತ್ರದುರ್ಗ ಅಲ್ಲದೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾಧಿಗಳು ಡಿಜೆ ಸದ್ದಿಗೆ ಹೆಜ್ಜೆಯನ್ನು ಹಾಕುತ್ತಿದ್ದ ದೃಶ್ಯ ಕಂಡು ಬಂದಿತು ಇದ್ದಲ್ಲದೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳು ತಮ್ಮ ತಲೆಗೆ ಕೇಸರಿ ಟೋಪಿ, ಕೊರಳಿಗೆ ಕೇಸರಿ ಶಾಲು, ಕೈಯಲ್ಲಿ ಕೇಸರಿ ಧ್ವಜ, ಇದರಲ್ಲಿ ಹನುಮ ಶ್ರೀರಾಮನ ಭಾವ ಚಿತ್ರ ಇದ್ದಿದ್ದು ಕಂಡು ಬಂದಿತು. ಕೆಲವೊಂದು ಯುವ ಜನತೆ ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತಿರುಗಿಸುತ್ತಾ ಇದ್ದಿದು ಕಂಡು ಬಂದಿತು.
ಚಿತ್ರದುರ್ಗದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು ನಗರದಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ. ನಗರದಾದ್ಯಂತ 6 ತಂಡಗಳ ಬಾಂಬ್ ಸ್ಕ್ವಾಡ್ ಶ್ವಾನ ದಳದ ವತಿಯಿಂದ ಸೂಕ್ಷ್ಮ ಸ್ಥಳಗಳಾದ ಬಸ್ ನಿಲ್ದಾಣ, ಮಾಲ್, ಲಡ್ಜ್, ಸಿನಿಮಾ ಮಂದಿರ, ಪ್ರಮುಖ ಹೋಟೆಲ್, ಜನ ಜಂಗುಳಿ ಪ್ರದೇಶಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಬಾಂಬ್ ಸ್ಕ್ವಾಡ್ ಜೊತೆ ಬೇಟಿ ನೀಡುತ್ತಿರುವ ಪೊಲೀಸರು ಅಪರಿಚಿತರು ತಂಗಿರುವ ಬಗ್ಗೆ ಹೊಸಬರ ಓಡಾಟದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಗರದಲ್ಲಿಂದು ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಇದ್ದು ದಾವಣಗೆರೆ, ಶಿವಮೊಗ್ಗ, ನಾಗಮಂಗಳ ಸೇರಿದಂತೆ ಕೆಲ ಕಡೆ ಗಲಬೆಗಳು ಉಂಟಾಗಿದ್ದು ಈ ನಿಟ್ಟಿನಲ್ಲಿ ಒಟ್ಟು ಆರು ಜನರನ್ನೊಳಗೊಂಡ ಒಟ್ಟು 6 ತಂಡಗಳಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಸಂಚಾರ ನಡೆಸುತ್ತಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಹಾಕಲಾಗಿದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಜನರ ಹಸಿವನ್ನು ನೀಗಿಸುವ ಸಲುವಾಗಿ ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳು ಪಲಾವ್, ಪುಳಿಯೋಗರೆ, ಚಿತ್ರಾನ್ನ, ಮೊಸರು ಅನ್ನ, ನೀರು, ಐಸ್ ಕ್ರೀಂ, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು. ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ರಕ್ಷಣೆ ಹಾಗೂ ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 3500 ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. 10 ಕೆಎಸ್ ಆರ್ ಪಿ, 12 ಡಿಎಆರ್, 4 ಕ್ಯೂ ಆರ್ ಟಿ, ತಂಡಗಳನ್ನು ಬಳಸಿಕೊಳ್ಳಲಾಗಿದೆ. ಐಜಿಪಿ, ಎಸ್ಪಿ, 6 ಎಎಸ್ಪಿ, 16 ಡಿವೈಎಸ್ಪಿ ಸೇರಿ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡಿದರು.
ಶೋಭಾಯಾತ್ರೆಯಲ್ಲಿ ನಾಡಿನ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿದವು. ಇನ್ನೂ 3 ಡಿಜೆಗಳ ಶಬ್ದಕ್ಕೆ ಯುವಕರು ಹಾಗೂ ಯುವತಿಯರು ಕುಣಿದು ಕುಪ್ಪಳಿಸಿದರು.