ಒಟ್ಟಾವಾ : ಕೆನಡಾ ಬ್ರಾಂಪ್ಟನ್ ನಗರದಲ್ಲಿರುವ ಹಿಂದೂ ದೇವಾಲಯದ ಮೇಲಿನ ದಾಳಿಯ ಸಂದರ್ಭದಲ್ಲಿ ಖಲಿಸ್ತಾನಿ ಧ್ವಜ ಹಿಡಿದು ಭಾರತೀಯರ ವಿರುದ್ಧ ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಕೆನಡಾ ಸರ್ಕಾರ ಅಮಾನುತುಗೊಳಿಸಿ ಆದೇಶ ನೀಡಿದೆ. ಅಮಾನತುಗೊಂಡ ಪೋಲೀಸ್ ಹರಿಂದರ್ ಸೋಹಿ ಎಂದು ಗುರುತಿಸಲಾಗಿದ್ದು, ಅವರು ಖಲಿಸ್ತಾನಿ ಧ್ವಜವನ್ನು ಹಿಡಿದು, ಹಿಂದೂ ದೇವಾಲಯದ ಎದುರು ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಸಮುದಾಯ ಸುರಕ್ಷತೆ ಮತ್ತು ಪೊಲೀಸ್ ಕಾಯಿದೆಯ ಅನುಗುಣವಾಗಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕೆನಡಾ ಮಾಧ್ಯಮ ಸಂಪರ್ಕ ಅಧಿಕಾರಿ ರಿಚರ್ಡ್ ಚಿನ್ ತಿಳಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ತನಖೆಯನ್ನು ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಖಂಡಿಸಿದ್ದಾರೆ, ಇದನ್ನು ಉದ್ದೇಶಪೂರ್ವಕ ಕೃತ್ಯ ಎಂದು ಕರೆದಿದ್ದು, ಭಾರತೀಯ ರಾಯಭಾರಿಗಳನ್ನು ಬೆದರಿಸುವ ಪ್ರಯತ್ನ ಎಂದು ಟೀಕಿಸಿದ್ದಾರೆ. ದಾಳಿ ಘಟನೆ ಬೆನ್ನಲ್ಲೇ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಯಭಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿದೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರ ನ್ಯಾಯವನ್ನು ಖಾತ್ರಿಪಡಿಸಿ, ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂಬ ನಿರೀಕ್ಷೆಯಿದೆ ಎಂದಿದ್ದಾರೆ.
