ಮನೆಯ ಹಿತ್ತಲಲ್ಲೇ ಬೆಳೆಯಬಲ್ಲ ಹೀರೆಕಾಯಿ ಎಂದರೆ ಬಹುತೇಕರಿಗೆ ಇಷ್ಟ ಆಗುವುದಿಲ್ಲ. ಆದರೆ ಈ ತರಕಾರಿ ಸೇವನೆಯಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನವಿದೆ. ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಹೀರೇಕಾಯಿ ಹೆಚ್ಚಾಗಿ ಬೆಳೆಯುತ್ತಾರೆ.
ಇದನ್ನು ಇಷ್ಟಪಡುವವರ ಸಂಖ್ಯೆ ಕಡಿಮೆಯಿದ್ದರೂ ಸಹ ಹೀರೆಕಾಯಿಯಿಂದ ಮನುಷ್ಯನ ಆರೋಗ್ಯಕ್ಕೆ ಎಷ್ಟೆಲ್ಲ ರೀತಿಯಲ್ಲಿ ಲಾಭವಿದೆ ಎಂದು ಒಮ್ಮೆ ತಿಳಿದರೆ ಸಾಕು, ಇನ್ನೆಂದೂ ಅವರಿಗೆ ಹೀರೆಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಹೀರೇಕಾಯಿಗಳಲ್ಲಿ ಅಗಾಧವಾಗಿ ಅಡಗಿರುವ ಫೈಬರ್, ಕಬ್ಬಿಣಾಂಶ , ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಅಂಶವು ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಲಾಭವನ್ನು ನೀಡುತ್ತದೆ.
ಹೀರೆಕಾಯಿಯಲ್ಲಿ ನೀರಿನ ಅಂಶ ಅಧಿಕವಾಗಿದೆ. ಹಾಗಾಗಿ ಮೊಟ್ಟ ಮೊದಲಿಗೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಇಲ್ಲವಾಗುತ್ತದೆ. ಸೇವಿಸಿದ ಯಾವುದೇ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣ ದೇಹದಲ್ಲಿ ಲಭ್ಯ ಆಗುತ್ತದೆ. ಹೀರೆಕಾಯಿಯಲ್ಲಿ ವಿಟಮಿನ್ ‘ ಎ ‘ ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ.ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ ಬೀಟಾ – ಕ್ಯಾರೋಟಿನ್ ಎಂಬ ವಿಟಮಿನ್ ‘ ಎ ‘ ಅಂಶದ ರೂಪ ಸರಿ ಪಡಿಸುತ್ತದೆ.
ಇದರ ಜೊತೆಗೆ ಕಣ್ಣಿನ ಹಲವು ಸಮಸ್ಯೆಗಳನ್ನು ಹೀರೆಕಾಯಿ ಯಲ್ಲಿರುವ ಔಷಧೀಯ ಪರಿಣಾಮಗಳು ಸರಿ ಮಾಡುತ್ತವೆ. ಹೀರೆಕಾಯಿಯಲ್ಲಿ ವಿಟಮಿನ್ ‘ ಬಿ6 ‘ ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ. ಹೀರೆಕಾಯಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಲಭ್ಯವಿದ್ದು, ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆ ಇದೆ.