ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದೇ ವೇಳೆ ಪ್ರಾಂಜಲ್ ಕುಟುಂಬಕ್ಕೆ ಮುಖ್ಯಮಂತ್ರಿ 50 ಲಕ್ಷ ರೂ ಪರಿಹಾರ ಘೋಷಿಸಿದರು.
ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು,ನವೆಂಬರ್ 22 ರಂದು ಕಾಶ್ಮೀರದ ರಜೌರಿಯ ಕಾವಿಕೋಟ್ ಎಂಬಲ್ಲಿ ಇಬ್ಬರು ಉಗ್ರರು ಅಡಗಿದ್ದರು.
ಕ್ಯಾಪ್ಟನ್ ಪ್ರಾಂಜಲ್ ಅವರು ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ನಾಗರಿಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಉಗ್ರರಿಂದ ತೀವ್ರವಾದ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ ಪ್ರಾಂಜಲ್ ಅವರು ನಾಗರಿಕರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಉಗ್ರರೊಂದಿಗೆ ಈ ವೇಳೆ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ಪ್ರಾಂಜಲ್ ಅವರು ತೀವ್ರವಾಗಿ ಗಾಯಗೊಂಡು ಹುತಾತ್ಮರಾದರು.
ಆದರೆ ಪ್ರಾಂಜಲ್ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಾಗರಿಕರನ್ನು ರಕ್ಷಿಸಿದರು. ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಹುತಾತ್ಮ ಯೋಧನ ಕುಟುಂಬಕ್ಕೆ ನಮ್ಮ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವೂ ಸಿಗಲಿದೆ ಎಂದು ಹೇಳಿದರು