ಬೆಂಗಳೂರು: ಹೆಣ್ಮಕ್ಕಳ ಕುರಿತು ಮೊಸಳೆಕಣ್ಣೀರು ಹಾಕುವ ಈ ಭಂಡ ಸರಕಾರಕ್ಕೆ ಪಾಠ ಕಲಿಸಲು ಬಿಸಿ ಮುಟ್ಟಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಹಿಳೆಯನ್ನು ಕಟ್ಟಿ ಹಾಕಿ ವಿವಸ್ತ್ರಗೊಳಿಸಿದ ಘಟನೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಇಂದು ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಒಳಪಟ್ಟಿದೆ. ಪರಿಶಿಷ್ಟ ಜಾತಿ ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಖಂಡನಾರ್ಹ ಮತ್ತು ಖೇದಕರ.
ದಲಿತರ ಕುರಿತು ಮೊಸಳೆ ಕಣ್ಣೀರು ಹಾಕುವ ಸರಕಾರ ಇದು. ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಆ ಸಂತ್ರಸ್ತೆಯನ್ನು ನೋಡಿಲ್ಲ ಎಂದು ಟೀಕಿಸಿದರು.
ಇದು ತುಘಲಕ್ ದರ್ಬಾರ್ ಎಂದು ಟೀಕಿಸಿದ ಅವರು, ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ. ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಪ್ರತಿಭಟನೆ ಮಾಡುತ್ತೇವೆ. ತಡಮಾಡದೆ ಹೆಣ್ಮಗಳಿಗೆ ನ್ಯಾಯ ದೊರಕಿಸಿ; ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ನಾಳೆ ದೆಹಲಿಯಿಂದ 4 ಸಂಸದರು, ಸಚಿವರು ದೆಹಲಿಯಿಂದ ಇಲ್ಲಿ ಬಂದು ವಿಷಯದ ಕುರಿತು ಮಾಹಿತಿ ಪಡೆಯಲಿದ್ದಾರೆ ಹಾಗೂ ಸಂತ್ರಸ್ತೆಯನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ದಲಿತ ಮಹಿಳೆಯನ್ನು ವಿವಸ್ತ್ರವಾಗಿಸಿದ ಘಟನೆಗೆ ಇಲ್ಲಿನ ಅಧಿವೇಶನ ಸಾಕ್ಷಿಯಾಗಿದೆ ಎಂದು ವಿಪಕ್ಷ ನಾಯಕ ಅಶೋಕ್ ಅವರು ಟೀಕಿಸಿದರು.
ಭ್ರಷ್ಟ, ಕಮಿಷನ್ ದಂಧೆಯ ಸರಕಾರ ಇದಾಗಿದೆ. ನಾಚಿಕೆ ಆಗುವುದಿಲ್ಲವೇ ನಿಮಗೆ? ಈ ಘಟನೆ ಖಂಡಿಸಲು ಒಂದು ಗಂಟೆ ಕೊಟ್ಟಿದ್ದರೆ ನಿಮ್ಮ ಗಂಟೇನು ಹೋಗುತ್ತಿತ್ತು ಎಂದು ಪ್ರಶ್ನಿಸಿದರು.
ಇದು ಸರಕಾರಕ್ಕೆ ಕಪ್ಪು ಚುಕ್ಕಿ ಎಂದರಲ್ಲದೆ, ಹೈಕೋರ್ಟ್ ಕೂಡ ಈ ಘಟನೆಯನ್ನು ಆಕ್ಷೇಪಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ತಿಳಿಸಿದರು.
ಸಂಸದರು, ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.