ಸುಳ್ಯ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಬಂಧಿತ ವ್ಯಕ್ತಿ ಅತೀಕ್ ಅಹ್ಮದ್ ನನ್ನು ಜನವರಿ 20 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯ ಎಂದು ಗುರುತಿಸಲಾದ ಅಹ್ಮದ್, ಜುಲೈ 2022 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನಡೆದ ಕೊಲೆಯ ನಂತರ ತಲೆಮರೆಸಿಕೊಂಡಿದ್ದ.
ಜುಲೈ 2022 ರಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಎಂಬಾತನನ್ನು ಬರ್ಬರವಾಗಿ ಕೊಂದ ಪ್ರಕರಣದಲ್ಲಿ ಅತೀಕ್ ಅಹಮದ್ 21 ನೇ ಆರೋಪಿಯಾಗಿದ್ದಾನೆ.
ಪ್ರಕರಣದ ಹಿನ್ನೆಲೆ ಬಿಜೆಪಿ ಯುವ ಮೋರ್ಚಾದ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೇಲೆ ಜುಲೈ 26, 2022 ರಂದು ರಾತ್ರಿ ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿಯ ಬಳಿ ಹಲ್ಲೆ ನಡೆಸಲಾಗಿತ್ತು. ಅತೀಕ್ ಅಹ್ಮದ್ ಬಂಧನದೊಂದಿಗೆ ಆರೋಪಪಟ್ಟಿಯಲ್ಲಿ ಹೆಸರಿಸಲಾದ 26 ಆರೋಪಿಗಳ ಪೈಕಿ ಬಂಧಿತರ ಸಂಖ್ಯೆ 21ಕ್ಕೆ ಏರಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಮತ್ತು ವಿಶಾಲವಾದ ಪಿತೂರಿಯನ್ನು ಬಿಚ್ಚಿಡಲು NIA ತನ್ನ ತನಿಖೆಯನ್ನು ಮುಂದುವರೆಸಿದೆ.