ಚಿತ್ರದುರ್ಗ : ಚೆಕ್‍ಡ್ಯಾಂಗಳ ರಾಜ ಎಂದೆ ಪ್ರಸಿದ್ದಿಯಾಗಿರುವ ಹೊಸದುರ್ಗದ ಹಿರಿಯ ಶಾಸಕ ಬಿ.ಜಿ.ಗೋವಿಂದಪ್ಪನವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಡಬೇಕು. ನಾಲ್ಕು ಬಾರಿ ಶಾಸಕರಾಗಿರುವ ಇವರಿಗೆ ರಾಜಕಾರಣದಲ್ಲಿ ಅಪಾರ ಅನುಭವವಿದೆ. ಹಾಗಾಗಿ ಪರಿಗಣನೆಗೆ ತೆಗೆದುಕೊಂಡು ಕುರುಬ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಹೆಚ್.ಮಂಜಪ್ಪ ಆಗ್ರಹಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುರಿ ಕಾಯುತ್ತಿದ್ದ ಹುಡುಗ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬೆಳೆದಿದ್ದಾರೆಂದರೆ ಅದೊಂದು ಸಾಧನೆ ಎಂದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿರುವುದು ಕೇವಲ ಕುರುಬರಿಗಷ್ಟೆ ಅಲ್ಲ. ಇಡಿ ಅಹಿಂದ ವರ್ಗಕ್ಕೆ ನೋವುಂಟಾಗಿದೆ ಎಂದರು
ಕಮ್ಮಿ ಸಾಧನೆಯಲ್ಲ. ಅಹಿಂದ ಸಂಘಟಕ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಂದಾಗ ವರಿಷ್ಟರು ಸ್ವಾಗತಿಸಿ ಎರಡು ಬಾರಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದರು. ಎರಡನೆ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಬಡವರು, ದೀನ ದಲಿತರು, ಶೋಷಿತರು, ಧ್ವನಿಯಿಲ್ಲದವರಿಗೆ ಶಕ್ತಿ ತುಂಬಿದರು. ವರಿಷ್ಟರ ಸೂಚನೆಯಂತೆ ರಾಜಿನಾಮೆ ನೀಡಿರುವುದು ನಮಗೆಲ್ಲಾ ನೋವಾಗಿದ್ದರು. ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನಾವುಗಳು ಸ್ವಾಗತಿಸುತ್ತೇವೆಂದು ತಿಳಿಸಿದರು.
ಡಿ.ಕೆ.ಶಿವಕುಮಾರ್‍ರವರ ಮಂತ್ರಿ ಮಂಡಲದಲ್ಲಿ ಕುರಿಬರಿಗೆ ಐದು ಸಚಿವ ಸ್ಥಾನ ಸಿಗಬೇಕು. ಏಳು ವಿಧಾನಪರಿಷತ್ ಸ್ಥಾನ ಖಾಲಿಯಾಗುತ್ತಿದೆ. ರಾಜ್ಯಸಭೆಗೂ ನಡೆಯುವ ಚುನಾವಣೆಯಲ್ಲಿ ಕುರುಬರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕೆಂದು ಬಿಜೆಪಿ. ಜೆಡಿಎಸ್.ನವರಿಗೂ ಆಗ್ರಹಿಸಿದ ಬಿ.ಟಿ.ಜಗದೀಶ್, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಸಮೀಕ್ಷೆಯನ್ನು ಸಿದ್ದರಾಮಯ್ಯನವರು ಸ್ವೀಕಾರ ಮಾಡಿರುವುದನ್ನು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅಂಗೀಕರಿಸಿ ಯಥಾವತ್ತಾಗಿ ಜಾರಿಗೊಳಿಸಬೇಕು. ಇದರಿಂದ ಹಿಂದುಳಿದ 104 ಜಾತಿಗಳಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ ಮಾತನಾಡಿ ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಓಬಿಸಿ. ಪರಿಶಿಷ್ಟ ಜಾತಿ
ಪರಿಶಿಷ್ಟ ವರ್ಗದವರನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಜಿಲ್ಲೆಯ ನಾಲ್ವರು ಶಾಸಕರುಗಳಿಗೆ ಸಚಿವ ಸ್ಥಾನ ಸಿಗಬೇಕು. ತಳಮಟ್ಟದ ಕುರುಬ ಜನಾಂಗವನ್ನು ನಿಮ್ಮ ಜೊತೆ ವಿಶ್ವಾಸದಲ್ಲಿಟ್ಟುಕೊಂಡು ಹೆಚ್ಚಿನ ಸ್ಥಾನಮಾನ ಕಲ್ಪಿಸುವಂತೆ ಮನವಿ ಮಾಡಿದರು.
ಮುತ್ತು, ಮಾಳೇಶ್, ಉಮೇಶ್, ಕುರುಬರ ಸಂಘದ ನಿರ್ದೇಶಕ ಹೊಸದುರ್ಗದ ಲಿಂಗಮೂರ್ತಿ, ಸುರೇಶ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.































