ಚಿತ್ರದುರ್ಗ : ಬಿಸಿಯೂಟ ತಯಾರಕರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಅಂಗನವಾಡಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಕಾರ್ಯಕರ್ತೆಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಗೇಟ್ ಹಾಕಿ ತಡೆದ ಪರಿಣಾಮ ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ಕುಳಿತು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷೆ ನಿಂಗಮ್ಮ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕರು ಯಾವುದೇ ಜೀವನ ಭದ್ರತೆಯಿಲ್ಲದೆ ಕಡಿಮೆ ಗೌರವ ಧನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಆಶ್ವಾಸನೆ ನೀಡಿದಂತೆ ಏಳು ಸಾವಿರ ರೂ.ಗಳ ವೇತನ ಹೆಚ್ಚಿಸಬೇಕು. ಆರು ಗಂಟೆ ಕೆಲಸದ ಅವಧಿಯ ಆದೇಶ ಹೊರಡಿಸಿ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ತಯಾರಕರಿಂದ ಎಸ್ಡಿಎಂಸಿ.ಗೆ ವರ್ಗಾವಣೆ ಮಾಡಿರುವುದನ್ನು ಹಿಂದಕ್ಕೆ ಪಡೆದು ಮೊದಲಿನಂತೆಯ ಖಾತೆ ಬದಲಾಯಿಸಬೇಕು. ಕೆಪಿಎಸ್ಸಿ. ಶಾಲೆ, ಇಸ್ಕಾನ್, ಮಠ, ಇನ್ನಿತರೆ ಸಂಘ ಸಂಸ್ಥೆಗಳಿಗೆ ಬಿಸಿಯೂಟ ವಿತರಣೆಯ ಹೊಣೆ ವಹಿಸುವುದರಿಂದ ಬಿಸಿಯೂಟ ತಯಾರಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಾಗಾಗಿ ಕೆಲಸದ ಭದ್ರತೆ ಒದಗಿಸಿ ನಿವೃತ್ತಿಯಾದವರಿಗೆ ಮಾಸಿಕ ಹತ್ತು ಸಾವಿರ ರೂ. ಪಿಂಚಣಿ ನೀಡುವಂತೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಮಲಿಯಪ್ಪ ಮಾತನಾಡಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್ಕೆಜಿ. ಯುಕೆಜಿ. ವಿಸ್ತರಣೆಯಾಗಬೇಕು. 2026 ಮಾರ್ಚ್-24 ರ ಸಭೆಯ ತೀರ್ಮಾನದಂತೆ ಹತ್ತು ಸಾವಿರ ಕೇಂದ್ರಗಳಿಗೆ ಅನುದಾನ ನೀಡಬೇಕು. ಮೂರರಿಂದ ಆರು ವರ್ಷದ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು. ಬಿಎಲ್ಓ, ಎಸ್ಐಆರ್. ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಅಂಗನವಾಡಿ ನೌಕರರು ಹಾಗೂ ಬಿಸಿಯೂಟ ತಯಾರಕರನ್ನು ಮುಕ್ತಗೊಳಿಸುವಂತೆ ಆಗ್ರಹಿಸಿದರು.
ಪಾರ್ವತಮ್ಮ, ಇಂದಿರಮ್ಮ, ವಿಜಯಮ್ಮ, ಬಿ.ಬೋರಮ್ಮ, ಅನುಸೂಯಮ್ಮ, ನಿರ್ಮಲಮ್ಮ, ಜೆ.ಎನ್.ಗಂಗಮ್ಮ, ಟಿ.ತಿಪ್ಪೇಸ್ವಾಮಿ, ಮಂಜುಳ, ಪುಟ್ಟಮ್ಮ, ಸಿ.ಜಯಮ್ಮ
ಪಾರ್ವತಮ್ಮ, ಕವಿತ, ರತ್ನಮ್ಮ, ರಾಜಮ್ಮ, ಮಂಜಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
































