ದಾವಣಗೆರೆ: ದಾವಣಗೆರೆಯ ಪ್ರತಿಭಾನ್ವಿತ ಹಾಗೂ ರಾಷ್ಟ್ರಮಟ್ಟದ ಖ್ಯಾತ ಬಾಡಿ ಬಿಲ್ಡರ್ ಸುಶೀಲ್ ಕುಮಾರ್ (26) ಅವರು ಜಿಮ್ ಮುಗಿಸಿ ಮನೆಗೆ ಮರಳಿದ ಕೆಲವೇ ಹೊತ್ತಿನಲ್ಲಿ ಹಠಾತ್ತನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ , ದಾವಣಗೆರೆಯ ಕೆಟಿಜೆ ನಗರದ ನಿವಾಸಿಯಾದ ಸುಶೀಲ್ ಕುಮಾರ್, ಎಂದಿನಂತೆ ರಾತ್ರಿ 8:30ರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದ ತಕ್ಷಣ ತಲೆಸುತ್ತು ಬರುತ್ತಿದೆ ಎಂದು ಹೇಳಿ, ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಲೋ ಬಿಪಿ (ಕಡಿಮೆ ರಕ್ತದೊತ್ತಡ) ಉಂಟಾಗಿ ತೀವ್ರ ಹೃದಯಾಘಾತಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಮುಖ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.































