ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದ್ದು, ಸುವೆಂದು ಅಧಿಕಾರಿ ಬಂಗಾಳ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಕೋಲ್ಕತ್ತಾದ ಬಿಸ್ವಾ ಬೆಂಗಾಳ ಕನ್ವೆನ್ಷನ್ ಸೆಂಟರ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಿತು. ಸುವೇಂದು ಅಧಿಕಾರಿ ಹೆಸರನ್ನು ಒಮ್ಮತದಿಂದ ಘೋಷಿಸಲಾಯಿತು.
ಮಮತಾ ಬ್ಯಾನರ್ಜಿಯವರನ್ನು ಎರಡು ಬಾರಿ ಸೋಲಿಸಿದ ದಿಗ್ಗಜರಾದ ಸುವೇಂದು ಅಧಿಕಾರಿ ಸದ್ಯ ಬಂಗಾಳ ಬಿಜೆಪಿಯಲ್ಲಿ ಅಗ್ರಗಣ್ಯ ನಾಯಕರಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿ ನಾಯಕರ ಹೆಸರನ್ನು ಸೂಚಿಸಲು ಹೇಳಲಾಗಿತ್ತು. ಆದರೆ ಸುವೆಂದು ಅಧಿಕಾರಿ ಬಿಟ್ಟು ಬೇರೆ ಯಾವ ಹೆಸರನ್ನೂ ಸೂಚಿಸದ ಹಿನ್ನೆಲೆಯಲ್ಲಿ ಅಂತಿಮವಾಗಿ ಸುವೆಂದು ಅಧಿಕಾರಿ ಅವರನ್ನು ಬಂಗಾಳ ಸಿಎಂ ಆಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.




























