ಚಿತ್ರದುರ್ಗ: ಹಿರಿಯೂರು ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2024-25ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4ರ ಅಡಿಯಲ್ಲಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಯೋಜನೆಯಡಿ ನಿಗದಿಪಡಿಸಲಾದ ಶೇ.24.10, ಶೇ.7.25 ಮತ್ತು ಶೇ.5ರ ಹಾಗೂ ಮೀಸಲಿಟ್ಟ ಅನುದಾನದಲ್ಲಿ ಹಿರಿಯೂರು ನಗರ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಜನಾಂಗದ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕ ನೆರವು ನೀಡಲಾಗುತ್ತದೆ. ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಹಾಗೂ ಬಿ.ಇ ವ್ಯಾಸಂಗಕ್ಕಾಗಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಪ್ರವೇಶ ಶುಲ್ಕವನ್ನು ಭರಿಸಲಾಗುವುದು. ಇದರೊಂದಿಗೆ, ಪರಿಶಿಷ್ಟ ಜಾತಿಯ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಹಾಗೂ ನಗರಸಭೆ ವ್ಯಾಪ್ತಿಯ ದಿವ್ಯಾಂಗ (ವಿಕಲಚೇತನ) ಚೇತನರಿಗೆ ತ್ರಿಚಕ್ರ ವಾಹನ ಖರೀದಿಸಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅರ್ಹ ಫಲಾನುಭವಿಗಳು ಇದೇ ಜೂನ್ 19 ರಿಂದ 30 ರೊಳಗೆ ನಗರಸಭೆ ಕಾರ್ಯಾಲಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯೂರು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
































