ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದು ರಾಜ್ಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿನಿಂದ ಶುಕ್ರವಾರ ಆಯೋಜಿಸಿದ್ದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ₹513 ಕೋಟಿ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಈ ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಟೀಕಿಸುತ್ತಿವೆ. ಪಾಪರ್ ಸರ್ಕಾರವಾಗಿದ್ದರೆ 513 ಕೋಟಿ ರೂ.ಗಳ ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿತ್ತೇ? ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಆದರೆ ಟೀಕೆ ಮಾಡುವುದನ್ನು ಹಾಗೂ ಸುಳ್ಳು ಹೇಳುವುದನ್ನು ಮಾತ್ರ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಜೆಡಿಎಸ್ ಪಕ್ಷಗಳು ಹೇಳಿಕೊಂಡಿರುವ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳುಗಳನ್ನೇ ಹೇಳಿದ್ದಾರೆ. ಹೀಗೆ ಅವರಿಗೆ ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ? ಆರ್.ಅಶೋಕ್, ಹೆಚ್. ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಇವರೆಲ್ಲರೂ ಬಹಳ ವರ್ಷಗಳಿಂದ ರಾಜಕೀಯದಲ್ಲಿದ್ದು, ಸುಳ್ಳು ಹೇಳುವುದರಲ್ಲಿ ಪರಿಣಿತಿ ಹೊಂದಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಜನರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳುತ್ತಿರುವಾಗ ಜಾರಿ ಮಾಡಿಲ್ಲ ಎಂದು ಹೇಗೆ ಹೇಳುತ್ತಾರೆ? ರಾಜ್ಯದ 3.50 ಕೋಟಿ ಮಹಿಳೆಯರು ಯಾವುದೇ ಬೇಧ ಭಾವವಿಲ್ಲದೇ ಶಕ್ತಿ ಯೋಜನೆಯನ್ನು ಬಳಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇಂಥ ಯೋಜನೆಯನ್ನು ಜಾರಿ ಮಾಡಿತ್ತೇ? ಈವರೆಗೆ 500 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಪ್ರತಿ ದಿನ 50-60 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಾವು ಮೊದಲ ಸ್ಥಾನಕ್ಕೆ ಬರುವ ಪ್ರಯತ್ನ ಮಾಡುತ್ತೇವೆ. ಕಬಿನಿ ಸೇತುವೆಗೆ 25 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಸಾಗರಕಟ್ಟೆ ಸೇತುವೆ, ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕೆಂಬುದು ಸರ್ಕಾರದ ಆಶಯ.
ಶಕ್ತಿ ಯೋಜನೆಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಪ್ರಶಂಸಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದರು. ಗ್ಯಾರಂಟಿ ಯೋಜನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಸರ್ಕಾರದ ಎರಡು ವರ್ಷದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ, ಸುಮಾರು 3 ರಿಂದ 4 ಲಕ್ಷ ಜನ ಆಗಮಿಸಿದ್ದರು. ಆದರೆ ಬಿಜೆಪಿಯವರು ಜನಾಕ್ರೋಶ ಕಾರ್ಯಕ್ರಮ ಮಾಡಿ, ಅಭಿವೃದ್ಧಿ ನಡೆಯುತ್ತಿಲ್ಲ, ಬೆಲೆ ಏರಿಕೆಯಾಗಿದೆ ಎಂಬ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಯಾವ ಕೆಲಸವನ್ನೂ ಮಾಡದೇ, ಕಾಂಗ್ರೆಸ್ ಸರ್ಕಾರದ ಯಶಸ್ಸಿಗೆ ಮರುಗುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಶಕ್ತಿ ಯೋಜನೆ, ನಂತರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತರಲಾಯಿತು. ತದನಂತರ ಜನವರಿ 2024 ರಲ್ಲಿ ಯುವನಿಧಿಯನ್ನು ಜಾರಿಗೊಳಿಸಲಾಗಿದ್ದು, ಇದಕ್ಕಾಗಿ 52,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಹಣ ಲೂಟಿ ಹೊಡೆದರು. 2,70,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣವಿಲ್ಲದೇ ಮಂಜೂರಾತಿ ನೀಡಿದರು. ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ತಮ್ಮ ಅವಧಿಯಲ್ಲಿ 1,66,000 ಕೋಟಿ ರೂ. ಯೋಜನೆಗಳಿಗೆ ಹಣವಿಲ್ಲದೇ ಮಂಜೂರು ಮಾಡಿದ ಫಲವಾಗಿ ನಮ್ಮ ಸರ್ಕಾರವು ಬಾಕಿ ಮೊತ್ತವನ್ನು ಪಾವತಿಸುತ್ತಿದೆ.
ಕೆ.ಆರ್.ನಗರದ ಶಾಸಕರು ಪ್ರಾಮಾಣಿಕರಾಗಿದ್ದು, ಕ್ಷೇತ್ರದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಮುಂದಿನ ದಿನಗಳಲ್ಲೂ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ.
ಹಾಲಿನ ದರ ಏರಿಕೆಯಾಗಿದ್ದು, ಹೆಚ್ಚಿನ ಮೊತ್ತ ರೈತರಿಗೆ ತಲುಪುತ್ತಿದೆಯೇ ಹೊರತು, ಸರ್ಕಾರದ ಬೊಕ್ಕಸಕ್ಕೆ ಬರುತ್ತಿಲ್ಲ. ನೆರೆರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಹಾಲಿನ ದರ ಕಡಿಮೆಯಿದೆ. ಬಿಜೆಪಿಯವರು ಕೇಂದ್ರದಲ್ಲಿ ಹೆಚ್ಚಿಸಿರುವ ದರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕಿಡಿ ಕಾರಿದರು.
ಸಿಂಗಾಪುರದಂತಹ ಹಲವಾರು ಏಷ್ಯಾದ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತು, ನಾಗರಿಕರನ್ನು ರಕ್ಷಿಸಲು ಕೇಂದ್ರ ಸರ್ಕಾರ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.