ಬೆಂಗಳೂರು: 2026 ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ -ಸೆಟ್ ಗೆ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಸೆಪ್ಟೆಂಬರ್ 5 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಸೆಪ್ಟಂಬರ್ 6 ಕೊನೆಯ ದಿನವಾಗಿದ್ದು, ಅಕ್ಟೋಬರ್ 1ರಂದು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು. ಅಕ್ಟೋಬರ್ 10ರಂದು ಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ.
ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಶೇಕಡ 55 ರಷ್ಟು ಅಂಕ ಪಡೆದಿರಬೇಕು ಎನ್ನುವ ಅರ್ಹತೆ ನಿಗದಿಪಡಿಸಲಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿ ಮಾತ್ರ ಅಭ್ಯರ್ಥಿಗಳು ಕೆ -ಸೆಟ್ ಪರೀಕ್ಷೆ ತೆಗೆದುಕೊಳ್ಳಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳ ಹೊರತುಪಡಿಸಿ ಮೀಸಲು ಕೋರಿದ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಕೆ ವೇಳೆ ಸ್ಪಷ್ಟವಾಗಿ ನಮೂದಿಸಬೇಕು ಚಾಲ್ತಿಯಲ್ಲಿರುವ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ನಮೂದಿಸಬೇಕು ಎಂದು ಹೇಳಲಾಗಿದೆ.
ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಈಗಾಗಲೇ ಕೆ-ಸೆಟ್ ಪರೀಕ್ಷೆಯಲ್ಲಿ ಯಾವುದೇ ಒಂದು ವಿಷಯದಲ್ಲಿ ಅರ್ಹತೆ ಪಡೆದುಕೊಂಡ ಅಭ್ಯರ್ಥಿ ಮುಂಬರುವ ಕೆ -ಸೆಟ್ ಪರೀಕ್ಷೆಯಲ್ಲಿ ಅದೇ ವಿಷಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ತಿಳಿಸಲಾಗಿದೆ.