ದೀಪಾವಳಿ ಹಬ್ಬ ಪಟಾಕಿ ಅವಘಡ.! 32 ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲು.!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ವರದಿಯಾಗಿದ್ದು, ಕಣ್ಣಿನ ಗಾಯಗಳಿಗೆ ತುತ್ತಾದ 32 ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಪಟಾಕಿ ಸಿಡಿಸುವ ವೇಳೆ ಮುನ್ನೆಚ್ಚರಿಕೆ ವಹಿಸದ ಕಾರಣ ಈ ದುರಂತ ಸಂಭವಿಸಿದ್ದು, ಗಾಯಗೊಂಡವರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸೇರಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಪ್ರಸ್ತುತ ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ತರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಲಭ್ಯವಿರುವ ಮಾಹಿತಿಯಂತೆ, ನಾರಾಯಣ ನೇತ್ರಾಲಯ ಒಂದರಲ್ಲೇ ಒಟ್ಟು 20 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 13 ಮಕ್ಕಳು ಹಾಗೂ 7 ಹಿರಿಯರು ಸೇರಿದ್ದಾರೆ. ಈ 20 ಜನರ ಪೈಕಿ 17 ಮಂದಿ ನೇರವಾಗಿ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, ಉಳಿದವರು ಪಟಾಕಿ ವೀಕ್ಷಿಸುವಾಗ ಅಪಾಯಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 9 ಜನರಿಗೆ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರಿಗೆ ಹಾಗೂ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ. ಹಬ್ಬದ ವೇಳೆ ಸಾರ್ವಜನಿಕರು ಹಾಗೂ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.
( AI ಚಿತ್ರ)