LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಯಾರೂ ನ್ಯಾಯದಿಂದ ವಂಚಿತರಾಗಬಾರದು: ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್

 

ಚಿತ್ರದುರ್ಗ : ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು. ಯಾರೂ ನ್ಯಾಯದಿಂದ ವಂಚಿತರಾಗಬಾರದೆನ್ನುವ ಉದ್ದೇಶವನ್ನಿಟ್ಟುಕೊಂಡು 1982 ರಿಂದಲೂ ಪ್ರತಿ ವರ್ಷ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು, ಮಕ್ಕಳು, ವಿಕಲಚೇತನರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವಿದೆ. ಕ್ರಿಮಿನಲ್ ಕೇಸ್ಗಳಿಗೂ ಇಲ್ಲಿ ಉಚಿತವಾಗಿ ನ್ಯಾಯವಾದಿಗಳಿದ್ದಾರೆ. ಇದರ ಸದುಪಯೋಗಪಡೆದುಕೊಳ್ಳಬೇಕು. ಕಾನೂನು ಸೇವಾ ಸಮಿತಿಯಲ್ಲಿ ನ್ಯಾಯವಾದಿಗಳು, ನ್ಯಾಯಾಧೀಶರುಗಳು ಇರುತ್ತಾರೆ. ಜಿಲ್ಲಾ ನ್ಯಾಯಾಲಯಗಳಲ್ಲಿಯೂ ನೆರವು ಸಿಗುತ್ತದೆ. ಸರ್ವೊಚ್ಚ ನ್ಯಾಯಾಲಯದಲ್ಲಿಯೂ ಪ್ರಾಧಿಕಾರವಿದೆ. 1987 ರಲ್ಲಿ ಮಾನಸಿಕ ಆರೋಗ್ಯ ಕಾಯಿದೆ ಜಾರಿಗೆ ಬಂದಿತು. ಜಿಲ್ಲಾಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಮಾನಸಿಕ ಅಸ್ವಸ್ಥರನ್ನು ಸಮಾಜ ಕೀಳಾಗಿ ನೋಡಬಾರದು. ಎಲ್ಲಿಯಾದರು ಮಾನಸಿಕ ರೋಗಿಗಳು ಕಂಡು ಬಂದರೆ ಚಿಕಿತ್ಸೆ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್ ಮಾತನಾಡಿ ಪ್ರಾಚೀನ ಕಾಲದಿಂದಲೂ ನ್ಯಾಯ ವ್ಯವಸ್ಥೆಯಿದೆ. ಜಿಲ್ಲೆಯ ಅನೇಕ ಕಡೆ ಈಗಲೂ ಕಟ್ಟೆಮನೆಗಳಿವೆ. ಅಲ್ಲಿ ಹಿರಿಯರು ಏನಾದರೂ ಸಮಸ್ಯೆಗಳು ಎದುರಾದಾಗ ನ್ಯಾಯ ನೀಡುವ ಪದ್ದತಿಯಿದೆ. ಸಿರಿವಂತರಿಗೆ ಮಾತ್ರ ನ್ಯಾಯ ಸಿಗುತ್ತದೆಂಬ ತಪ್ಪು ಕಲ್ಪನೆ ಸರಿಯಲ್ಲ. ಸಂವಿಧಾನದಡಿಯಲ್ಲಿಯೇ ಪ್ರತಿಯೊಂದು ಕಾನೂನು ಜಾರಿಯಾಗುತ್ತದೆ. ಬಡವರು, ಧ್ವನಿಯಿಲ್ಲದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನ್ಯಾಯ ಸಿಗಬೇಕು. ಕಾನೂನು ಸಲಹೆ ಕೂಡ ಅಲ್ಲಿ ಸಿಗುತ್ತದೆ. ಉಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಿಗುವ ಕಾನೂನು ನೆರವು ಕುರಿತು ನಿಮ್ಮ ಮನೆ. ಸಂಬಂಧಿಕರು, ಅಕ್ಕಪಕ್ಕದವರು, ನೆರೆಯ ಊರುಗಳಲ್ಲಿರುವವರಿಗೆ ವಿಚಾರ ತಿಳಿಸಿ. ಗಸ್ತು ವ್ಯವಸ್ಥೆ ಹಿಂದಿನಿಂದಲೂ ಇದೆ. ಪೊಲೀಸರೆಂದರೆ ಒಂದು ಕಾಲದಲ್ಲಿ ಜನತೆಯಲ್ಲಿ ಭಯ ಇತ್ತು. ಈಗ ಸಾಕಷ್ಟು ಬದಲಾವಣೆಯಾಗಿದೆ. ಪೊಲೀಸರೆಂದರೆ

ಜನಸ್ನೇಹಿ ಎನ್ನುವುದನ್ನು ಮರೆಯಬೇಡಿ ಎಂದರು.

ಜಿಲ್ಲೆಯಲ್ಲಿ 298 ಮಾದಕ ವ್ಯಸನಿಗಳಿದ್ದಾರೆ. ಒಂದು ಮನೆಯಲ್ಲಿ ಒಬ್ಬ ಮಾದಕ ವ್ಯಸನಿಯಿದ್ದರೆ ಇಡಿ ಕುಟುಂಬವೇ ಕಷ್ಟ ಅನುಭವಿಸಬೇಕಾಗುತ್ತದೆ. ಕೌನ್ಸಿಲಿಂಗ್ ಮೂಲಕ 28 ಮಂದಿಯನ್ನು ಮಾದಕ ವ್ಯಸನದಿಂದ ಹೊರ ತರಲಾಗಿದೆ. ರಾಂಪುರ ಹಾಗು ನಾಯಕನಹಟ್ಟಿಯಲ್ಲಿ ಗಾಂಜಾ ಬೆಳೆಯನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದೇವೆ. ವಿದ್ಯಾರ್ಥಿಗಳು ಗಾಂಜಾ ಮತ್ತಿತರೆ ಮಾದಕ ವ್ಯಸನಗಳಿಗೆ ಬಲಿಯಾಗಬೇಡಿ. ಮಾಹಿತಿ ಕೊರತೆ, ಸರಿಯಾದ ಮಾರ್ಗದರ್ಶನವಿಲ್ಲದೆ ಆಸೆ ಆಮಿಷಗಳಿಗೆ ಒಳಗಾಗಿ ಕೆಲವೊಮ್ಮೆ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಪಠ್ಯ ಪುಸ್ತಕಗಳಲ್ಲಿ ಸಿಗುವ ಶಿಕ್ಷಣದ ಜೊತೆ ಕೌಶಲ್ಯ ಶಿಕ್ಷಣ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಂಡು ಸದೃಢ ಸಮಾಜ ಕಟ್ಟಿ ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದರು.

ಎಲ್ಲಿ ಬಡತನ, ಅನಕ್ಷರತೆಯಿರುತ್ತದೋ ಅಲ್ಲಿ ಬಾಲ್ಯ ವಿವಾಹವಾಗುತ್ತದೆ. ಪೋಕ್ಸೋ ಕಾಯಿದೆಯ ಬಗ್ಗೆಯ ನಿಮ್ಮಲ್ಲಿ ಜ್ಞಾನವಿರಬೇಕು. ಪೋಕ್ಸೋದಲ್ಲಿ ಅತಿ ಹೆಚ್ಚು ಶಿಕ್ಷೆಯಾಗುತ್ತಿದೆ. ಹೆಣ್ಣು ಮಕ್ಕಳಿಗೆ ಪೋಕ್ಸೋ ದೊಡ್ಡ ಅಸ್ತ್ರವಿದ್ದಂತೆ. ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಜಾಸ್ತಿಯಿದೆ ಎಂದು ನುಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಮೀರ್ ಪಿ.ನಂದ್ಯಾಲ್ ಮಾತನಾಡಿ ನ್ಯಾಯದ ಕೊರತೆಯಿಂದ ಯಾರ ಜೀವನವೂ ಹಾಳಾಗಬಾರದೆಂದು ನವೆಂಬರ್ 9 ರಂದು ಪ್ರತಿ ವರ್ಷವೂ ರಾಷ್ಟ್ರೀಯ ಕಾನೂನು ಸೇವಾ ದಿನವನ್ನು ಆಚರಿಸಿ ವಿದ್ಯಾರ್ಥಿಗಳು, ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುವುದು. ಬಾಲ್ಯ ವಿವಾಹ, ಡ್ರಗ್ಸ್, ಪೋಕ್ಸೋ ಜಿಲ್ಲೆಯಲ್ಲಿ ಜಾಸ್ತಿಯಿದೆ. ಚಿಕ್ಕ ವಯಸ್ಸಿನಲ್ಲಿ ಡ್ರಗ್ಸ್ಗೆ ಗುರಿಯಾಗಬೇಡಿ. ದುಶ್ಚಟಗಳಿಂದ ದೂರವಿದ್ದು

ಶಿಕ್ಷಣದ ಕಡೆ ಗಮನ ಕೊಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾನೂನಾತ್ಮಕವಾಗಿ ಏನಾದರೂ ಸಮಸ್ಯೆಗಳು ಇದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಪಡೆಯಬಹುದು. ಡ್ರಗ್ಸ್ ಮಾರಾಟ ಮಾಡುವವರಿಗಷ್ಟೆ ಅಲ್ಲ. ಸೇವನೆ ಮಾಡಿದವರಿಗೂ ಕಾನೂನು ಅಡಿಯಲ್ಲಿ ಶಿಕ್ಷೆಯಾಗುತ್ತದೆ. ಶಿಕ್ಷಣದಿಂದ ಮಾತ್ರ ನೂರೆಂಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಾನಸಿಕ ರೋಗ ತಜ್ಞೆ ಡಾ.ರಾಜೇಶ್ವರಿ ಮಾತನಾಡಿ ಮಾದಕ ವಸ್ತುಗಳ ಸೇವೆನೆಯಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರಬಹುದು. ಉಸಿರಿನ ಮೂಲಕವೂ ಮಾದಕ ವಸ್ತುಗಳ ಸೇವನೆ ಅತ್ಯಂತ ಅಪಾಯಕಾರಿ. ಮಾದಕ ವ್ಯಸನಿಗಳು ಖಿನ್ನತೆಗೊಳಗಾಗಿ ಏಕಾಂಗಿಯಾಗಿರಬಹುದು. ಮಾನಸಿಕ ಮತ್ತು ದೈಹಿಕವಾಗಿ ಮಾದಕ ವ್ಯಸನಿಗಳು ದುರ್ಬಲರಾಗುತ್ತಾರೆ. ಹಾಗಾಗಿ ಇಂತಹ ಕೆಟ್ಟ ದುಶ್ಚಟಗಳಿಂದ ದೂರವಿದ್ದು, ಸದೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಾದಕ ವಸ್ತು ಸೇವನೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೊಂದು ಮಾರಣಾಂತಿಕ ರೋಗ. ಶಿಕ್ಷಣದ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಓದಿನ ಕಡೆ ಹೆಚ್ಚಿನ ಗಮನ ಕೊಡಿ. ನಿಯಮಿತ ವ್ಯಾಯಾಮ, ದಿನಕ್ಕೆ ಏಳೆಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು. ಮಾದಕ ವ್ಯಸನಿಗಳನ್ನು ಯಾರು ದ್ವೇಷಿಸಬಾರದು. ಅದಕ್ಕೆ ಬದಲಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಎಂದು ವಿನಂತಿಸಿದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ದೊಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕ ವೆಂಕಟೇಶ್ರೆಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಚನ್ನಬಸಪ್ಪ ನಿರೂಪಿಸಿದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST