ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ನಕಲಿ ಮತ್ತು ಅನರ್ಹ ಫಲಾನುಭವಿಗಳನ್ನು ತಡೆಗಟ್ಟುವ ಉದ್ದೇಶದಿಂದ ಮನೆಯ ಯಜಮಾನಿ ಹೆಸರಿನಲ್ಲೇ ಸಿಮ್ ಕಾರ್ಡ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಯೋಜನೆಯ 33ನೇ ಕಂತಿನ ಒಟ್ಟು 2,480 ಕೋಟಿ ರೂಪಾಯಿ ಅನುದಾನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದರು.
ಅನರ್ಹರ ತಡೆಗೆ 'ಸ್ವಂತ ಸಿಮ್' ಕಡ್ಡಾಯ ನಿಯಮ: ಸರ್ಕಾರದ ಯೋಜನೆಗಳು ಕೇವಲ ಕರ್ನಾಟಕದ ನೈಜ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಹಾಗೂ ಅಕ್ರಮಗಳನ್ನು ತಡೆಯಬೇಕು ಎಂಬ ಕಾರಣದಿಂದ ಸಿಮ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದೆ. ಸರ್ಕಾರದ ನೂತನ ಮಾನದಂಡದಂತೆ, ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಪಡೆಯಲು ಮನೆಯ ಯಜಮಾನಿಯೇ ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಸುಧಾರಣಾ ಕ್ರಮಗಳಿಂದಾಗಿ ಪ್ರಸ್ತುತ 1 ಕೋಟಿ 24 ಲಕ್ಷ ನೈಜ ಫಲಾನುಭವಿಗಳಿಗೆ ವ್ಯವಸ್ಥಿತವಾಗಿ ಹಣ ತಲುಪುತ್ತಿದ್ದು, ಆಗಸ್ಟ್‌ವರೆಗಿನ ಕಂತುಗಳು ಪಾವತಿಯಾಗಿವೆ. ಇದೀಗ 33ನೇ ಕಂತಿನ ₹2,480 ಕೋಟಿ ಹಣವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ದಿನೇಶ್ ಗೂಳಿಗೌಡ ವಿವರಿಸಿದರು.