ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ನೀರಿನ ಸಂಪನ್ಮೂಲವನ್ನು ಮಿತವಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳಲು ಕೃಷಿ ಇಲಾಖೆ ಮುಂದಾಗಿದ್ದು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಇತರೆ ಉಪಚಾರ) ರೈತರಿಗೆ ಶೇಕಡಾ 50 ರಷ್ಟು ಸಹಾಯಧನದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ಬೆಳೆಗಳಿಗೆ ನೀರನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ನೀರಿನ ಸಾಗಾಣಿಕೆ ವೇಳೆ ವ್ಯರ್ಥವಾಗುವುದನ್ನು ತಡೆಗಟ್ಟಲು ಈ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಬರ ಪರಿಸ್ಥಿತಿಯ ನಡುವೆ ನೀರಿನ ಸಂರಕ್ಷಣೆಗೆ ರೈತರು ಸಹಕರಿಸಬೇಕೆಂದು ಇಲಾಖೆ ಮನವಿ ಮಾಡಿದೆ.
ಈ ಸೌಲಭ್ಯ ಪಡೆಯಲು ಆಸಕ್ತ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.ಅರ್ಜಿಯೊಂದಿಗೆ ರೈತ ಗುರುತಿನ ಸಂಖ್ಯೆ(ಎಫ್ಐಡಿ) ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
ಇಲಾಖೆ ನಿಗದಿಪಡಿಸಿದ ಅರ್ಹತಾ ಮಾನದಂಡಗಳು ಮತ್ತು ನಿಯಮಗಳ ಅನ್ವಯ ಅರ್ಹ ರೈತರಿಗೆ ಶೇ. 50ರ ಸಬ್ಸಿಡಿ ದರದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗುತ್ತಿದ್ದು, ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆದು ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.