ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದೆ.
ಇಂದು(ಅ.18) ಸಂಜೆ ಮುಂಬೈನ ಜುಹು ಪ್ರದೇಶದ ಪುಷ್ಪ ಪಾರ್ಕ್ ಬಳಿ ಬೈಕ್ನಲ್ಲಿ ಬಂದ ಬಂದೂಕುಧಾರಿ ದುಷ್ಕಮಿಗಳು, ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. 7 ಸುತ್ತು ಗುಂಡು ಹಾರಿಸಲಾಗಿದ್ದು, ನಟನಿಗೆ ಯಾವುದೇ ಗಾಯಗಳಾಗಿಲ್ಲ. ಕಾರು ಚಾಲಕ ಮತ್ತು ಸಮೀಪದಲ್ಲಿದ್ದ ಆಟೊರಿಕ್ಷಾ ಚಾಲಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಫಿರ್ದೌಸ್ ಎಡಗೈಗೆ ಗುಂಡು ತಗುಲಿದೆ. ಚಾಲಕ ಮತ್ತು ಆಟೊರಿಕ್ಷಾ ಚಾಲಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿ ನಡೆಸಿದವರನ್ನು ಪತ್ತೆಹಚ್ಚಲು 15 ತಂಡಗಳನ್ನು ರಚಿಸಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.ಸಲ್ಮಾನ್ ಖಾನ್ ಜೊತೆಗೆ ಒಡನಾಟ ಇಟ್ಟುಕೊಡಿರುವುದರಿಂದ ಟೈಗರ್ ಶ್ರಾಫ್ ಅವರ ಮೇಲೆ ದಾಳಿ ನಡೆಸಿರುವುದಾಗಿ ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಎಂಬುವವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿರುವ ಬಾಲಿವುಡ್ನ ಇತರರಿಗೂ ಪೋಸ್ಟ್ ಮೂಲಕ ಬೆದರಿಕೆ ಹಾಕಿದ್ದಾರೆ. ಪಂಡಿತ್, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯ ಎಂದು ವರದಿಯಾಗಿದ್ದು, ಪೊಲೀಸರು ಖಚಿತಪಡಿಸಬೇಕಿದೆ. ಮಗ ಸುರಕ್ಷಿತವಾಗಿದ್ದಾನೆ ಎಂದು ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್ ಖಚಿತಪಡಿಸಿದ್ದಾರೆ.