ಚಿತ್ರದುರ್ಗ: 2026-27ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಆಸಕ್ತ ಕ್ರೀಡಾಪಟುಗಳು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಕ್ರೀಡಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದ್ದು, ಎಲ್ಲಾ ವಯೋಮಾನದವರೂ ಭಾಗವಹಿಸಬಹುದಾಗಿದೆ.
ಹಿರಿಯೂರು ತಾಲೂಕು ಮಟ್ಟದ ಕ್ರೀಡಾಕೂಟ ಸೆಪ್ಟೆಂಬರ್ 3ರಂದು ಹಿರಿಯೂರಿನ ತಾಲೂಕು ಕ್ರೀಡಾಂಗಣದಲ್ಲಿ, ಹೊಳಲ್ಕೆರೆ ತಾಲೂಕು ಮಟ್ಟದ ಕ್ರೀಡಾಕೂಟ ಸೆಪ್ಟೆಂಬರ್ 6ರಂದು ರಾಮಗಿರಿಯ ಎಸ್.ಜೆ.ಎಂ. ಪ್ರೌಢಶಾಲೆಯಲ್ಲಿ, ಮೊಳಕಾಲ್ಮೂರು ತಾಲೂಕು ಮಟ್ಟದ ಕ್ರೀಡಾಕೂಟ ಸೆಪ್ಟೆಂಬರ್ 6ರಂದು ಕೋನಸಾಗರದ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಾಗೂ ಚಿತ್ರದುರ್ಗ ತಾಲೂಕು ಮಟ್ಟದ ಕ್ರೀಡಾಕೂಟ ಸೆಪ್ಟೆಂಬರ್ 17ರಂದು ನಗರದ ವೀರವನಿತೆ ಓಬವ್ವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗಲಿವೆ.
ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿವಿಧ ವಿಭಾಗಗಳ ಓಟ, ಜಿಗಿತ, ಎಸೆತ ಸ್ಪರ್ಧೆಗಳು ಹಾಗೂ ರಿಲೇ), ವಾಲಿಬಾಲ್, ಖೋ-ಖೋ, ಕಬಡ್ಡಿ, ಫುಟ್‍ಬಾಲ್, ಥ್ರೋಬಾಲ್ ಮತ್ತು ಯೋಗಾಸನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸ್ಪರ್ಧಾಳುಗಳು https://dasaracmcup.in/ ವೆಬ್‍ಸೈಟ್ ಮೂಲಕ ಕಡ್ಡಾಯವಾಗಿ ಆನ್‍ಲೈನ್ ನೋಂದಣಿ ಮಾಡಿಕೊಳ್ಳಬೇಕು. ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಕ್ರೀಡಾಪಟುಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಆಧಾರ್ ಕಾರ್ಡ್ ಅಥವಾ ಶಾಲಾ/ಕಾಲೇಜಿನ ಗುರುತಿನ ಚೀಟಿಯನ್ನು ದೃಢೀಕರಣಕ್ಕಾಗಿ ಸಲ್ಲಿಸಬೇಕಾಗುತ್ತದೆ. ಸಮವಸ್ತ್ರಧಾರಿ ಸೇವೆಗಳಲ್ಲಿರುವವರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಅಥ್ಲೆಟಿಕ್ಸ್‍ನಲ್ಲಿ ಪ್ರಥಮ/ದ್ವಿತೀಯ ಸ್ಥಾನ ಹಾಗೂ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-235635 ಅಥವಾ ಮೊಬೈಲ್ ಸಂಖ್ಯೆ 9611673475 ಅನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
( AI ಚಿತ್ರ)