ನವದೆಹಲಿ: ಅಕ್ಟೋಬರ್ 15ರಿಂದ ಎನ್‌ಪಿಸಿಐ ಹೊಸ ನಿಯಮಾವಳಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ರೂಪಿಸಿರುವ ಪರಿಷ್ಕೃತ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ನಿಯಮಗಳು ಅಕ್ಟೋಬರ್ 15 ರಿಂದ ಜಾರಿಗೆ ಬರಲಿವೆ. ವ್ಯಾಪಾರಿಗಳಿಗೆ ಗ್ರಾಹಕರು ಮಾಡುವ (P2M) ಪಾವತಿಗಳಿಗೆ ಸಂಬಂಧಿಸಿದಂತೆ ಹೊಸ ದರಗಳ ವರ್ಗೀಕರಣವನ್ನು ಪ್ರಕಟಿಸಲಾಗಿದೆ.
ಪರಿಷ್ಕೃತ ಎಂಡಿಆರ್ ದರಗಳ ವಿವರ
₹2,000 ವರೆಗಿನ ವಹಿವಾಟು: ಸಣ್ಣ ಮೊತ್ತದ ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
₹2,000 ಕ್ಕಿಂತ ಮೇಲ್ಪಟ್ಟ ಪಾವತಿಗಳು: ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ.
ದೊಡ್ಡ ವಹಿವಾಟುಗಳಿಗೆ ಗರಿಷ್ಠ ಮಿತಿ: 75,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೃಹತ್ ವಹಿವಾಟುಗಳಿಗೆ ಎಂಡಿಆರ್ ಮೊತ್ತವು ಗರಿಷ್ಠ 300 ರೂಪಾಯಿಗೆ ಮಾತ್ರ ಸೀಮಿತವಾಗಿರುತ್ತದೆ.
ಅತ್ಯಗತ್ಯ ಸೇವೆಗಳಿಗೆ ಫ್ಲಾಟ್ ದರ: ರೈಲ್ವೆ ಟಿಕೆಟ್, ಟೆಲಿಕಾಂ ರೀಚಾರ್ಜ್, ವಿಮಾ ಪ್ರೀಮಿಯಂ, ಇಂಧನ ಬಂಕ್ ಹಾಗೂ ಕೃಷಿ ಪರಿಕರಗಳ ಖರೀದಿಗೆ 2,000 ರೂ. ದಾಟಿದರೆ ಶೇಕಡಾವಾರು ಬದಲಾಗಿ ಕೇವಲ 5 ರೂಪಾಯಿ ಸ್ಥಿರ ಶುಲ್ಕ ವಿಧಿಸಲಾಗುತ್ತದೆ.
ಬಂಡವಾಳ ಮಾರುಕಟ್ಟೆ ವರ್ಗಾವಣೆ: ಮ್ಯೂಚುವಲ್ ಫಂಡ್, ಶೇರು ಮಾರುಕಟ್ಟೆ ಬ್ರೋಕರೇಜ್ ಮತ್ತು ಸೆಕ್ಯುರಿಟೀಸ್ ಪಾವತಿಗಳಿಗೆ ಶೇಕಡಾ 0.02 ರಷ್ಟು (ಗರಿಷ್ಠ 300 ರೂ.) ದರ ನಿಗದಿಯಾಗಿದೆ.
ಗ್ರಾಹಕರಿಗೆ ಸಂಪೂರ್ಣ ಉಚಿತ, ಸಣ್ಣ ವ್ಯಾಪಾರಿಗಳಿಗೂ ನೆಮ್ಮದಿ
ಈ ಎಲ್ಲಾ ಎಂಡಿಆರ್ ಶುಲ್ಕಗಳು ವ್ಯಾಪಾರಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಸಾರ್ವಜನಿಕರಿಗೆ ಅಥವಾ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ (P2P), ಅಂದರೆ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ನಡುವಿನ ಹಣ ವರ್ಗಾವಣೆ ಎಂದಿನಂತೆ ಸಂಪೂರ್ಣ ಉಚಿತವಾಗಿರುತ್ತದೆ. ಇದರೊಂದಿಗೆ, ಕ್ಯೂಆರ್ ಕೋಡ್ ಮೂಲಕ ತಿಂಗಳಿಗೆ 1 ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
-