‘ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ, ಮಕ್ಕಳು ಮೌಡ್ಯದಿಂದ ಹೊರಗೆ ಬರಬೇಕು’- ಸಿ.ಎಂ ಕರೆ

ಬೆಂಗಳೂರು: ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಡಾಕ್ಟರ್ ಓದಿದವರು ಇನ್ನೂ ಮೌಡ್ಯ ಬಿಟ್ಟಿಲ್ಲ. ಓದಿದವರೇ ಇನ್ನೂ ಹಣೆಬರಹದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಇಂಥಾ ಮೌಡ್ಯದಲ್ಲಿ ನಂಬಿಕೆ ಇಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ SSLC ಮತ್ತು PUC ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಉತ್ತೇಜಿಸಿ ಮಾತನಾಡಿ,

ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ, “ನಮಗೆ ಸರಾಯಿ ಅಂಗಡಿ ಬೇಡ. ವಸತಿ ಶಾಲೆ ಬೇಕು” ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ. ಅವತ್ತಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪ ಸಂಖ್ಯಾತ ಇಲಾಖೆಯಡಿಯಲ್ಲಿರುವುದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ ಎಂದು ವಿವರಿಸಿದರು.

Advertisement

ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ.‌ ಇದನ್ನು ಹೋಗಲಾಡಿಸಬೇಕಾಗಿದೆ. ನನಗೆ ಶಿಕ್ಷಣ ಸಿಕ್ಕಿದ್ದರಿಂದಲೇ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು ಎಂದರು.ಬುದ್ದ, ಬಸವಣ್ಣ ಎಷ್ಟು ಶತಮಾನಗಳ ಹಿಂದೆ ಜಾತಿ ವ್ಯವಸ್ಥೆ ಅಳಿಸಲು ಶ್ರಮಿಸಿದರು. ಆದರೆ ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

SDLC ಮತ್ತು PUC ಯಲ್ಲಿ ಹೆಚ್ಚು ಅಂಕ ಗಳಿಸಿದ, ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಈ ವಿದ್ಯಾರ್ಥಿಗಳ ಸಾಧನೆಗೆ ನೆರವಾದ ಎಲ್ಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.ಮಕ್ಕಳಿಗೆ ಜಾತಿ, ಧರ್ಮದ ತಾರತಮ್ಯ ಕಲಿಸುವವರೇ ನಾವು. ಆದ್ದರಿಂದ ಪೋಷಕರು, ಶಿಕ್ಷಕರು ಮೊದಲು ಕಂದಾಚಾರ,‌ಮೌಡ್ಯದಿಂದ ಹೊರಗೆ ಬರಬೇಕು. ಆಗ ಮಕ್ಕಳೂ ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು.

ಹುಟ್ಟುವಾಗ ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟಿ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎನ್ನುವ ಕುವೆಂಪು ಅವರ ಮಾತು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಮಕ್ಕಳು ಅಲ್ಪ ಮಾನವರಾಗದಂತೆ ಕಾಪಾಡುವ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ ಎಂದರು.ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಈ ಬಾರಿ ಶೇ96 ರಷ್ಟು ಫಲಿತಾಂಶ ಪಡೆದಿದ್ದಾರೆ. ಮುಂದಿನ ಬಾರಿ ಶೇ100 ರಷ್ಟು ಅಂಕ ಪಡೆಯಬೇಕು ಎಂದು ಕರೆ ನೀಡಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement