ಬೆಂಗಳೂರು: ರಾಜ್ಯ ಸರಕಾರ ಮಹಿಳೆಯರ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದ ಹೆಣ್ಣು ಮಕ್ಕಳಿಗೆ (girl Students) ಶಿಕ್ಷಣ ಇಲಾಖೆ ಶುಭ ಸುದ್ದಿ ಕೊಟ್ಟಿದ್ದು, ಇನ್ಮುಂದೆ ಎಲ್ಲಾ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇಕಡಾ 50ರಷ್ಟು ಸೀಟುಗಳನ್ನು ಮೀಸಲಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದು ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಿಗೂ ಕೂಡ ಅನ್ವಯವಾಗಲಿದೆ. CBSE, ICSE ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಅನ್ವಯವಾಗುವಂತೆ ಮೀಸಲಾತಿ ಜಾರಿಗೊಳಿಸಿ ಸರಕಾರ ಆದೇಶಿಸಿದೆ.
ಪ್ರತೀ ತರಗತಿಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇಕಡಾ 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲು, ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೇ ಇದ್ದಾಗ ಉಳಿದ ಸೀಟುಗಳನ್ನು ಬಾಲಕರಿಗೆ ಹಂಚಿಕೆ ಮಾಡಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆ ಹೊರತು ಪಡಿಸಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಬಾಲಕಿಯರಿಗೆ ಮೀಸಲು ಇಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
