ಚಿತ್ರದುರ್ಗ : ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ. ಪಕ್ಷಗಳನ್ನು ಸೋಲಿಸಿ ರೈತ, ಕಾರ್ಮಿಕರ ಪಕ್ಷಗಳು ಅಧಿಕಾರಕ್ಕೆ ಬರಬೇಕಿದೆ ಎಂದು ಎಐಟಿಯುಸಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್ಬಾಬು ತಿಳಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ. ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಮ್ಯುನಿಸ್ಟ್ ಕಚೇರಿ ಮುಂಭಾಗ ಶುಕ್ರವಾರ ನಡೆದ 49 ನೇ ಹುತಾತ್ಮ ಕಾರ್ಮಿಕರ ಮೇ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
1925 ರ ಕಾಯ್ದೆಗಳನ್ನು ಸರ್ಕಾರ ಮಾರ್ಪಾಡು ಮಾಡಿದೆ. ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ಹೊರ ಬರುತ್ತಿರುವವರಿಗೆ ಉದ್ಯೋಗವಿಲ್ಲದಂತಾಗಿದೆ. ಸೂರಿಗಾಗಿ ಸಮರ ಯೋಜನೆಯಡಿ ನಗರದಲ್ಲಿ ಮನೆಗಳಿಗಾಗಿ ಏಳು ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದುವರೆವಿಗೂ ಒಬ್ಬರಿಗೂ ಮನೆಗಳು ಸಿಕ್ಕಿಲ್ಲ. ಮೇ. 19 ರಿಂದ ನಗರಸಭೆ ತಾಲ್ಲೂಕು ಪಂಚಾಯಿತಿ ಎದುರು ನಿರಂತರ ಧರಣಿ ನಡೆಸಲಾಗುವುದು. ಕಾರ್ಪೊರೇಟ್ ಕಂಪನಿಗಳಿಗೆ ಸಾಲ ಕೊಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕ್ಗಳನ್ನು ಖಾಸಗಿಕರಣಗೊಳಿಸಲು ಹೊರಟಿದೆ. ಇದರ ವಿರುದ್ದ ಕಾರ್ಮಿಕರು, ರೈತರು ಎಚ್ಚೆತ್ತುಕೊಳ್ಳಬೇಕೆಂದರು.
ಮೇ ದಿನಾಚರಣೆ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ. ಜಿಲ್ಲಾ ಸಮಿತಿ ಅಧ್ಯಕ್ಷ ಕಾಂ.ಬಿ.ಬಸವರಾಜ್ ಮಾತನಾಡಿ ಆಳುವ ಸರ್ಕಾರಗಳು ಹೊಸ ಹೊಸ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರು ರೈತರನ್ನು ಬೀದಿಪಾಲು ಮಾಡುತ್ತಿವೆ. ರಾಗಿ ಮತ್ತು ಮೆಕ್ಕೆಜೋಳ ಖರೀಧಿ ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ಕ್ವಿಂಟಾಲ್ ರಾಗಿಗೆ 1260 ರೂ. ನಷ್ಟವಾಗುತ್ತಿದೆ. ಸರ್ಕಾರವೇ ನೇರವಾಗಿ ಖರೀಧಿಸಬೇಕು. ಎಪಿಎಂಸಿ.ಯಲ್ಲಿ ಮುನ್ನೂರು ಲೈಸೆನ್ಸ್ ಕಾರ್ಮಿಕರಿದ್ದಾರೆ. ಮುಂದಿನ ದಿನಗಳಲ್ಲಿ ಲೈಸೆನ್ಸ್ಗಾಗಿ ಕಾರ್ಮಿಕರು ಹೋರಾಡಬೇಕಾಗುತ್ತದೆಂದು ಹೇಳಿದರು.
ರಾಜ್ಯ ರೈತ ಸಂಘದ ವಲಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ಬಾಬು ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಕೊಡುತ್ತಿಲ್ಲ. ಕಾರ್ಮಿಕರು ಸಂಘಟನೆಯಾಗಿ ಹೋರಾಟ ಮಾಡುವ ಮೂಲಕ ನ್ಯಾಯ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು, ಕಾರ್ಮಿಕರು ಒಂದಾಗದಿದ್ದರೆ ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ. ಕೇಂದ್ರ ಸರ್ಕಾರ 32 ಕಾನೂನುಗಳನ್ನು ರದ್ದುಪಡಿಸಿ ಕೇವಲ ನಾಲ್ಕು ಕಾನೂನುಗಳನ್ನು ಮಾತ್ರ ಉಳಿಸಿದೆ. ಮುಂದಿನ ದಿನಗಳಲ್ಲಿ ದೊಡ್ಡ ಸಮಾವೇಶ ನಡೆಸಿ ನಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮಂಡಿಸೋಣ ಎಂದರು.
ಸಿಪಿಐ. ಜಿಲ್ಲಾ ಸಹ ಕಾರ್ಯದರ್ಶಿ ಮೊಳಕಾಲ್ಮುರುವಿನ ಜಾಫರ್ ಷರೀಫ್ ಮಾತನಾಡಿ ನಾನಾ ವಲಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ
ಕಾನೂನುಗಳನ್ನು ಹೇರುತ್ತಿದೆ. ಅವೈಜ್ಞಾನಿಕ ಕಾನೂನುಗಳ ಜಾರಿಯಿಂದ ಕಾರ್ಮಿಕರು, ರೈತರ ಬದುಕು ದಿವಾಳಿಯಾಗುತ್ತಿದೆ. ಬೆಲೆ ಏರಿಕೆಯಾಗಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ಕನಿಷ್ಟ ವೇತನ, ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಹೋರಾಟದಿಂದ ಮಾತ್ರ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯ. ನ್ಯಾಯಾಲಯಗಳು ಸರ್ಕಾರದ ಪರವಾಗಿ ನಿಂತಿರುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತಿರುವ ಯಾವುದಾದರೂ ಪಕ್ಷವಿದೆಯೆಂದರೆ ಅದು ಭಾರತ ಕಮ್ಯುನಿಸ್ಟ್ ಪಕ್ಷ ಎಂದು ಶ್ಲಾಘಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಮಾತನಾಡುತ್ತ ರೈತರು, ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಅನೇಕ ಕೇಸುಗಳನ್ನು ಹಾಕಿಸಿಕೊಂಡಿದ್ದೇವೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ದೆಹಲಿಯಲ್ಲಿ 526 ಸಂಘಟನೆಗಳು ಒಂದು ವರ್ಷಗಳ ಕಾಲ ಹೋರಾಟ ನಡೆಸಿದವು. ಹಣವಿದ್ದವರು, ಬಂಡವಾಳಶಾಹಿಗಳು ಯಾರು ಬೇಕಾದರೂ ಕೃಷಿ ಭೂಮಿಯನ್ನು ಖರೀಧಿಸಬಹುದಾದಂತ ಕಾನೂನುಗಳನ್ನು ಸರ್ಕಾರಗಳು ಜಾರಿಗೆ ತಂದಿರುವುದರಿಂದ ರೈತ ಭೂಮಿಯನ್ನು ಕಳೆದುಕೊಳ್ಳುವಂತಾಗಿದೆ. ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನುಡಿದರು.
ಎಐಟಿಯುಸಿ. ಹೊಸದುರ್ಗ ತಾಲ್ಲೂಕು ಕಾರ್ಯದರ್ಶಿ ಕಾಂ.ಕುಮಾರಸ್ವಾಮಿ ಎನ್.ಸಿ. ಮಾತನಾಡಿ ಕಳೆದ 49 ವರ್ಷಗಳಿಂದಲೂ ಸಿಪಿಐ. ಕಾರ್ಮಿಕ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಬೇಕಾಗಿದೆ. ಮೂರು ವರ್ಷಗಳಿಂದಲೂ ಬಡವರಿಗೆ ಒಂದು ಮನೆಯನ್ನು ಕೊಟ್ಟಿಲ್ಲ. ತಾಲ್ಲೂಕು ಮಟ್ಟಗಳಲ್ಲಿಯೂ ರೈತರು, ಕಾರ್ಮಿಕರು ಹೋರಾಟ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮಣಿಸಬೇಕಿದೆ ಎಂದು ಹೇಳಿದರು.
ಎಐಟಿಯುಸಿ. ರಾಜ್ಯ ಉಪಾಧ್ಯಕ್ಷ ಕಾಂ.ಟಿ.ಆರ್.ಉಮಾಪತಿ, ಕಾಂ.ತಿಪ್ಪಮ್ಮ, ಕಾಂ.ಡಿ.ಮಹೇಶ್ವರಿ, ಕಾಂ.ಬಿ.ಹೆಚ್.ಹನುಮಂತಪ್ಪ, ಕಾಂ.ಕುಮಾರಣ್ಣ ಇವರುಗಳು ಮಾತನಾಡಿದರು.
ಕಾಂ.ರಘುವೀರ್, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ಡಿ.ಪೆನ್ನಯ್ಯ, ಭಾರ್ಗವ ಇವರುಗಳು ವೇದಿಕೆಯಲ್ಲಿದ್ದರು.
ಕಾಂ.ಅಮಿನಾಬಿ, ಕಾಂ.ಈ.ಸತ್ಯಕೀರ್ತಿ, ಕಾಂ.ಡಿ.ಪೆನ್ನಯ್ಯ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಕಾರ್ಮಿಕರು ಮೇ.ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು
































