ಚಿತ್ರದುರ್ಗ : ಶಿಕ್ಷಣದ ಜೊತೆ ಮಕ್ಕಳು ಸಂಸ್ಕಾರವನ್ನು ಕಲಿಯಬೇಕೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ದಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಧನುಶಂಕರ್ ಕರೆ ನೀಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ದಿ ಸಮಾಜದ ವತಿಯಿಂದ 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಹೊಸದುರ್ಗ ನಗರದ ಗುರು ಒಪ್ಪತ್ತಿನ ಸ್ವಾಮಿ ವಿರಕ್ತ ಮಠದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ರಂಗಗಳಲ್ಲಿಯೂ ಸ್ಪರ್ಧೆಯಿರುವುದರಿಂದ ಒಂದೊಂದು ಅಂಕಗಳಿಗೂ ಮಹತ್ವವಿದೆ. ಹಾಗಾಗಿ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರಿಂದ ವಿದ್ಯಾರ್ಥಿ ಜೀವನದಲ್ಲಿ ಮುಂದೆ ಹೆಚ್ಚಿನ ಸಾಧನೆ ಮಾಡಲು ಸಹಕಾರಿಯಾಗುವುದಲ್ಲದೆ ಇತರೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆಂದು ತಿಳಿಸಿದರು.
ಹೊಸದುರ್ಗ ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ದಿ ಸಮಾಜದ ಅಧ್ಯಕ್ಷ ಬಿ.ಪಿ.ದಯಾನಂದ ಮಾತನಾಡುತ್ತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದಂತಾಗುತ್ತದೆಂದು ಹೇಳಿದರು.
ಮುಖಂಡರುಗಳಾದ ಚಿದಾನಂದಪ್ಪ, ಮೃತ್ಯುಂಜಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ವಿರುಪಾಕ್ಷಪ್ಪ, ಒಪ್ಪತ್ತಿನಸ್ವಾಮಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಎಸ್.ಸಿದ್ದರಾಮೇಶ್, ಜಿಲ್ಲಾಧ್ಯಕ್ಷ ಜೆ.ಶಿವಪ್ರಕಾಶ್, ಮಂಜುನಾಥ್, ಉಪನ್ಯಾಸಕ ಚಿದಾನಂದ್, ಮಠದ ವ್ಯವಸ್ಥಾಪಕ ಮಹೇಶ್ ನಿಟುವಳ್ಳಿ ಇವರುಗಳು ವೇದಿಕೆಯಲ್ಲಿದ್ದರು.
ಪುಷ್ಪಲತಾ ಪ್ರಾರ್ಥಿಸಿದರು. ಮಲ್ಲೇಶ್ ರೇಷ್ಮೆರಾಜ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು.

































