ಚಿತ್ರದುರ್ಗ : ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನಕ್ಕೆ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಪೀಠಾಧಿಪತಿ ಗಳಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
“ಗ್ರಾಮೀಣ ಹಿನ್ನೆಲೆಯಿಂದ ಬಂದು, ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಉದಾತ್ತ ಮೌಲ್ಯಗಳನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದ ಶ್ರೀಮತಿ ಚೆನ್ನಮ್ಮನವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಸರಳತೆ, ಸಜ್ಜನಿಕೆ ಹಾಗೂ ಅಪಾರ ಸಹನೆಯ ಸಾಕಾರ ಮೂರ್ತಿಯಾಗಿದ್ದ ಅವರು, ನಾಡಿನ ಜನರ ಗೌರವದ ಮಾತೃಶ್ರೀಯಾಗಿದ್ದರು. ದೇವರಲ್ಲಿ ಅಚಲ ನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆಯನ್ನು ಹೊಂದಿದ್ದ ಅವರ ಬದುಕು ಇತರರಿಗೆ ಮಾದರಿಯಾಗಿತ್ತು.
ಎಚ್.ಡಿ. ದೇವೇಗೌಡರ ಸುದೀರ್ಘ ರಾಜಕೀಯ ಹೋರಾಟದ ಪ್ರತಿಯೊಂದು ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತು, ಅವರು ದೇಶದ ಅತ್ಯುನ್ನತ `ಪ್ರಧಾನಮಂತ್ರಿ’ ಹುದ್ದೆಯವರೆಗೆ ಏರಲು ಶ್ರೀಮತಿ ಚೆನ್ನಮ್ಮನವರು ನೀಡಿದ ಬೆಂಬಲ ಮತ್ತು ತ್ಯಾಗ ಅವಿಸ್ಮರಣೀಯವಾದುದು. ಅಧಿಕಾರ ಎನ್ನುವುದು ಗಂಡ, ಮಕ್ಕಳು, ಅಳಿಯಂದಿರು ಹಾಗೂ ಸೊಸೆ-ಮಕ್ಕಳ ಕರಕಮಲದಲ್ಲಿದ್ದರೂ, ಅಹಂಕಾರ ಎನ್ನುವ ಲವಲೇಶವೂ ತಮ್ಮ ಸುತ್ತ ಇರದಂತೆ ಬದುಕಿ, ಸರಳತೆಗೆ ಹಾಗೂ ಸಹಜತೆಗೆ ಸಾಂಕೇತಿಕ ರೂಪವಾಗಿದ್ದರು ಆ ಮಾತೃಶ್ರೀಯವರು. ಇಡೀ ಕುಟುಂಬವನ್ನು ಪ್ರೀತಿ-ವಾತ್ಸಲ್ಯದಿಂದ ಒಗ್ಗೂಡಿಸಿಕೊಂಡು ಮುನ್ನಡೆಸಿದ ಅವರ ಮಾತೃತ್ವ ಅನನ್ಯವಾದುದು.
ಭಗವಂತನು ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಹೆಮ್ಮರವಾಗಿದ್ದ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡರಿಗೆ, ಅವರ ಇಡೀ ಕುಟುಂಬದ ಸದಸ್ಯರಿಗೆ ಹಾಗೂ ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಈ ತೀವ್ರ ಶೋಕವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಜಗದ್ಗುರು ಸಿದ್ಧರಾಮೇಶ್ವರರಲ್ಲಿ ಪ್ರಾರ್ಥಿಸುತ್ತೇವೆ” ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.































