ಬೆಂಗಳೂರು: ಪ್ರಸೂತಿ ರಜೆ ಮೇಲೆ ತೆರಳುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆಯ ಸೌಲಭ್ಯವನ್ನು ನೀಡಲಾಗುತ್ತದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉಪನ್ಯಾಸಕಿಯರಿಗೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆ ಮಂಜೂರು ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ಇದರಿಂದಾಗಿ ಮಹಿಳಾ ಅತಿಥಿ ಉಪನ್ಯಾಸಕಿಯರು ಹೆರಿಗೆಯ ಸಮಯದಲ್ಲಿ 90 ದಿನ ವೇತನ ಸಹಿತ ರಜೆ ಪಡೆದುಕೊಳ್ಳಬಹುದು. ಮಾತೃತ್ವ ರಜೆಯ ಮೇಲೆ ತೆರಳುವ ಉಪನ್ಯಾಸಕಿಯರ ಜಾಗದಲ್ಲಿ ಬದಲಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಈ ಬದಲಿ ಉಪನ್ಯಾಸಕಿಯರಿಗೆ ಹಾಲಿ ಇರುವ ನಿಯಮದಂತೆ ಗೌರವಧನ ನೀಡಲಾಗುವುದು.
ರಜೆಯ ಮೇಲೆ ತೆರಳುವ ಉಪನ್ಯಾಸಕಿಯರಿಗೆ ವೇತನ ನೀಡಲು ಮತ್ತು ಬದಲಿ ಉಪನ್ಯಾಸಕರ ಗೌರವಧನಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನ ಒದಗಿಸಲಾಗುವುದು. ಈ ಹಿಂದೆ ಅತಿಥಿ ಉಪನ್ಯಾಸಕಿಯರಿಗೆ ಹೆರಿಗೆ ವೇಳೆ ರಾಜ್ಯದಲ್ಲಿ ವೇತನ ರಹಿತ ರಜೆ ಲಭ್ಯವಿತ್ತು. ಇದರಿಂದ ಅವರಿಗೆ ಆರ್ಥಿಕ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್ ಘೋಷಣೆಯಂತೆ 90 ದಿನ ವೇತನ ಸಹಿತ ಮಾತೃತ್ವ ರಜೆ ಸೌಲಭ್ಯ ಕಲ್ಪಿಸಲಾಗಿದೆ.
































