ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಗೆ ಕೊನೆಗೂ ರಾಜ್ಯ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ ಜುಲೈ 19ರ ಭಾನುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಫಲಾನುಭವಿಗಳ ಮರುಪರಿಶೀಲನೆಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆಯಿಂದ ಅರ್ಹರನ್ನು ಕೈಬಿಡುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ನಾವು ಕೊಡುವ ತೆರಿಗೆದಾರರ ಹಣ ನೇರವಾಗಿ ಅರ್ಹ ಮಹಿಳೆಯರ ಕೈಗೇ ತಲುಪಬೇಕು. ಈ ಕಾರಣಕ್ಕಾಗಿ ಬಯೋಮೆಟ್ರಿಕ್ ಅಥವಾ ಫೇಸಿಯಲ್ ಅಥೆಂಟಿಕೇಷನ್ (ಮುಖದ ಗುರುತು) ದೃಢೀಕರಣವನ್ನು ಕಡ್ಡಾಯಗೊಳಿಸಲಾಗುತ್ತಿದೆ, ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮಿ ದುಡ್ಡು ಬೇಕಿದ್ರೆ ಈ ಹೊಸ ನಿಯಮಗಳು ಕಡ್ಡಾಯ
ಸರ್ಕಾರ ಜಾರಿಗೆ ತರುತ್ತಿರುವ ಹೊಸ ಮಾರ್ಗಸೂಚಿಗಳ ಪ್ರಕಾರ ಇನ್ನು ಮುಂದೆ ಫಲಾನುಭವಿಗಳು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ:
ಸ್ವಂತ ಮೊಬೈಲ್ ಸಂಖ್ಯೆ ಕಡ್ಡಾಯ: ಅರ್ಜಿ ಸಲ್ಲಿಸುವಾಗ ಫಲಾನುಭವಿ ಮಹಿಳೆಯದ್ದೇ ಫೋನ್ ನಂಬರ್ ಇರಬೇಕು. ಯಾರದ್ದೋ ನಂಬರ್ ಕೊಟ್ಟು ಸರ್ಕಾರದಿಂದ ಹೋಗುವ ಸಂದೇಶಗಳು (SMS) ದುರುಪಯೋಗ ಆಗಬಾರದು.
ಮಹಿಳೆಯರದ್ದೇ ಬ್ಯಾಂಕ್ ಖಾತೆ ಇರಬೇಕು: ಗೃಹಲಕ್ಷ್ಮಿ ಹಣ ಜಮೆಯಾಗಲು ಗಂಡನ ಖಾತೆ ಅಥವಾ ಮಕ್ಕಳ ಬ್ಯಾಂಕ್ ಖಾತೆಯನ್ನು ನೀಡಲು ಅವಕಾಶವಿಲ್ಲ. ಕಡ್ಡಾಯವಾಗಿ ಕುಟುಂಬದ ಯಜಮಾನಿ ಮಹಿಳೆಯ ವೈಯಕ್ತಿಕ ಖಾತೆಗೆ ಮಾತ್ರ ಹಣ ಜಮೆಯಾಗಲಿದೆ.
ಮನೆ ಬಾಗಿಲಿಗೆ ಬರಲಿದೆ ಗ್ಯಾರಂಟಿ ತಂಡ: ಫಲಾನುಭವಿಗಳ ಪರಿಶೀಲನೆಗಾಗಿ ವಿಶೇಷ ಫಾರಂ ಸಿದ್ಧಪಡಿಸಲಾಗುತ್ತಿದ್ದು, ಸರ್ಕಾರದ ಗ್ಯಾರಂಟಿ ತಂಡವು ನೇರವಾಗಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ. ಈ ತಂತ್ರಜ್ಞಾನ ಆಧಾರಿತ ಮರುಪರಿಶೀಲನೆಗಾಗಿ ಸರ್ಕಾರ 20 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ರಾಜ್ಯದಲ್ಲಿ ಸದ್ಯ 1.20 ಕೋಟಿಗೂ ಅಧಿಕ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಸರ್ಕಾರ ನಡೆಸಿದ ಪ್ರಾಥಮಿಕ ತನಿಖೆ ಹಾಗೂ ಆಪರೇಷನ್ ಗೃಹಲಕ್ಷ್ಮಿ ಕಾರ್ಯಾಚರಣೆಯ ಮೂಲಕ ಈಗಾಗಲೇ ಮೃತಪಟ್ಟಿರುವ ಹಾಗೂ ಅನರ್ಹರಾಗಿದ್ದ ಸುಮಾರು 4.30 ಲಕ್ಷ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಇದರಿಂದಾಗಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.































