ಬೆಂಗಳೂರು: ಒಂದು ವಾರ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ವರದಿಮಾಡಿದೆ. ಹಗಲಿನ ವೇಳೆ ಬಿಸಿಲನ ತೀವ್ರತೆ ಹೆಚ್ಚಾಗಲಿದೆ. ಆದರೆ, ಸಂಜೆ ಅಥವಾ ರಾತ್ರಿ ವೇಳೆಗೆ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ.
ಮೇ 8ರವರೆಗೂ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು, ಸಿಡಿಲು ಮತ್ತು ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನ ಮಳೆ ಪ್ರಮಾಣ ತುಸು ಕಡಿಮೆಯಾಗಲಿದೆ. ನಂತರ ಮತ್ತೆ ಮಳೆ ಚುರುಕಾಗುವ ನಿರೀಕ್ಷೆಯಿದೆ.ಮಳೆ ಬಿದ್ದ ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ವಾತಾವರಣವು ಸ್ವಲ್ಪ ಮಟ್ಟಿಗೆ ತಂಪಾಗಿದೆ.
ಕಲಬುರಗಿಯಲ್ಲಿ ದಾಖಲೆಯ ತಾಪಮಾನ: 45.4 ಡಿಗ್ರಿ ಸೆಲ್ಸಿಯಸ್ ದಾಖಲು
ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲ ತಾಪ ತೀವ್ರವಾಗಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಮೇ 2ರಂದು ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ 45.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಈ ವರ್ಷದ ಗರಿಷ್ಠ ಉಷ್ಣಾಂಶ ದಾಖಲಿಸಿದೆ. 2019ರ ಏಪ್ರಿಲ್ 15ರಂದು ಜಿಲ್ಲೆಯ ಅಫಜಲಪುರ ತಾಲೂಕಿನ ಅತನೂರು ಗ್ರಾಮದಲ್ಲಿ 46.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. 2024ರಲ್ಲಿ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ 46.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿತ್ತು.
































