ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದಾಗಿ, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ.
ಕಳೆದ ಎರಡು ದಿನಗಳಿಂದ ಐಟಿ ಸಿಟಿಯಲ್ಲಿ ಆರಂಭವಾಗಿರುವ ಮಳೆ ಆಟ ಇಂದೂ ಮುಂದುವರಿಯಲಿದೆ. ಮಧ್ಯಾಹ್ನದ ನಂತರ ನಗರದಾದ್ಯಂತ ದಟ್ಟ ಕಾರ್ಮೋಡಗಳು ಕವಿಯಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಇದರಿಂದಾಗಿ ಬೆಂಗಳೂರಿನ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಲಿದ್ದು, ಹವಾಮಾನ ಸಂಪೂರ್ಣ ತಂಪಾಗಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆಗೆ ಭಾರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಪ್ರಚಂಡ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹವಾಮಾನ ಬದಲಾಗಲಿದ್ದು, ಬಲವಾದ ಗಾಳಿಯೊಂದಿಗೆ ಮಳೆ ಸುರಿಯುವ ಮುನ್ಸೂಚನೆ ಇದೆ. ಒಟ್ಟಾರೆಯಾಗಿ ರಾಜ್ಯದ ಬಹುತೇಕ ಕಡೆಗಳಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಲಿದ್ದು, ವಾತಾವರಣದಲ್ಲಿ ತಂಪು ಮೂಡಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
































