ದಾವಣಗೆರೆ : ವನಮಹೋತ್ಸವ ಎನ್ನುವುದು ಕೇವಲ ಗಿಡ ನೆಡುವ ಹಬ್ಬವಲ್ಲ, ಅದು ಪರಿಸರವನ್ನು ಪ್ರೀತಿಸುವ ಸಂಸ್ಕೃತಿಯಾಗಿದೆ. ವಿದ್ಯಾರ್ಥಿಗಳು ತಾವು ನೆಟ್ಟ ಗಿಡಗಳಿಗೆ ತಮ್ಮ ಹೆಸರಿನ ಟ್ಯಾಗ್ ಹಾಕಿ, ಪ್ರತಿ 15 ದಿನಗಳಿಗೊಮ್ಮೆ ಅವುಗಳ ಬೆಳವಣಿಗೆಯನ್ನು ಜವಾಬ್ದಾರಿಯಿಂದ ಗಮನಿಸಬೇಕೆಂದು ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಅವರು ಬುಧವಾರ ತುಂಗಭದ್ರಾ ಬಡಾವಣೆಯ ಕೆ.ಎಚ್.ಬಿ ಕಾಲೋನಿಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಮತ್ತು ಕೇಂದ್ರ ಸರ್ಕಾರದ ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿ ಹೆಸರಿನಲ್ಲಿ ಒಂದು ಗಿಡ) ವಿಶೇಷ ಅಭಿಯಾನದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಮೊದಲ ಬಾರಿಗೆ 1950 ರಲ್ಲಿ ಅಂದಿನ ಕೃಷಿ ಮತ್ತು ಅರಣ್ಯ ಸಚಿವರಾಗಿದ್ದ ಕೆ.ಎಂ. ಮುನ್ಷಿ ಅವರು ಈ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಪ್ರಸ್ತುತ 2026ರ ವೇಳೆಗೆ ಈ ಅಭಿಯಾನವು ಯಶಸ್ವಿಯಾಗಿ 76ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ಸ್ಮರಿಸಿದರು.
ಕರ್ನಾಟಕದ ಹೆಮ್ಮೆಯ ಪರಿಸರವಾದಿ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಇಂದಿನ ಯುವ ಪೀಳಿಗೆಗೆ ಅತ್ಯಂತ ಮಾದರಿಯಾಗಿದೆ. ಕುಡಿಯುವ ನೀರಿಲ್ಲದ ಕಷ್ಟದ ಕಾಲದಲ್ಲೂ ರಸ್ತೆ ಬದಿಯಲ್ಲಿ ಸುಮಾರು 4 ಕಿಲೋಮೀಟರ್‌ನಷ್ಟು ಆಲದ ಮರಗಳನ್ನು ನೆಟ್ಟು ಹೆಮ್ಮರಗಳನ್ನಾಗಿ ಸಾಕಿ ಪೋಷಿಸಿದ ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕೇವಲ 12 ಗಂಟೆಗಳಲ್ಲಿ 50,000 ಸ್ವಯಂಸೇವಕರು ಒಟ್ಟಾಗಿ ಸೇರಿ ಬರೋಬ್ಬರಿ 15 ಲಕ್ಷ ಗಿಡಗಳನ್ನು ನೆಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದರು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಗ್ರಂಥಾಲಯಗಳ ಸದುಪಯೋಗ ಪಡೆದುಕೊಂಡು ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ದಿನಪತ್ರಿಕೆಗಳ ಪ್ರಮುಖ ಮುಖ್ಯಾಂಶಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ, ಮಳೆನೀರು ಕೊಯ್ಲು ಪದ್ಧತಿ ಅಳವಡಿಕೆ, ಅಂತರ್ಜಲ ಮರುಪೂರಣದ ಮಹತ್ವ ಹಾಗೂ ನೀರು ಮತ್ತು ವಿದ್ಯುತ್ ಉಳಿತಾಯ ಮಾಡುವ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಹೊಂದಿರಬೇಕು. ಇಂದಿನ ಯುವ ಪೀಳಿಗೆಯು ಧೂಮಪಾನ, ಮಾದಕ ದ್ರವ್ಯಗಳಂತಹ ಭೀಕರ ದುಶ್ಚಟಗಳಿಂದ ದೂರವಿರಬೇಕು. ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ, ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆರೋಗ್ಯ ಕಾಯ್ದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಮಾತನಾಡಿ, ಮನೆಗಳಲ್ಲಿ ಬಳಕೆಯಾಗುವ ಆಟದ ಸಾಮಾನು, ಸ್ಕೇಲ್, ಟೂತ್‌ಬ್ರಷ್, ಟೂತ್‌ಪೇಸ್ಟ್ ಕವರ್ ಹಾಗೂ ಹಾಲಿನ ಪ್ಯಾಕೆಟ್‌ಗಳು ಸೇರಿದಂತೆ ಯಾವುದೇ ರೀತಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ವಾರಕ್ಕೊಮ್ಮೆ ಒಟ್ಟುಗೂಡಿಸಿ ನಿಮ್ಮ ಶಾಲೆಗಳಿಗೆ ನೀಡಿದರೆ ಇದು ಪರಿಸರಕ್ಕೆ ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗಿದ್ದು, ಶಾಲಾ ಮಕ್ಕಳು ಈ ಕುರಿತು ತಮ್ಮ ಪೋಷಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ನಿಯಮ ಉಲ್ಲಂಘಿಸಿ ತ್ಯಾಜ್ಯ ಎಸೆದಿದ್ದಕ್ಕಾಗಿ ಇಂದು ಬೆಳಗ್ಗೆ ₹25,000 ದಂಡ ವಿಧಿಸಲಾಗಿದೆ. ನಗರದ ಕುಂದುವಾಡ ಕೆರೆಯ ರಿಂಗ್ ರಸ್ತೆ ಬಳಿ ಹೊಸದಾಗಿ ಮನೆ ಕಟ್ಟುತ್ತಿರುವ ವ್ಯಕ್ತಿಯೊಬ್ಬರು ಲೈಟ್ ಕವರ್ ಹಾಗೂ ಬಲ್ಬ್‌ಗಳ ತ್ಯಾಜ್ಯವನ್ನು ದೊಡ್ಡ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿ ರಸ್ತೆ ಬದಿಗೆ ಎಸೆದಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿದೆ. ಇಂತಹ ಬೇಜವಾಬ್ದಾರಿ ಕೃತ್ಯಗಳ ವಿರುದ್ಧ ಸಾರ್ವಜನಿಕರೇ ಜಾಗೃತರಾಗಿ ಮಾದರಿಯಾಗಬೇಕಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗುತ್ತಿದೆ ಅದರ ಪ್ರಯೋಜನೆಯನ್ನು ಪಡೆದುಕೊಳ್ಳುವಂತೆ ಸ್ಥಳೀಯವಾಗಿ ಇರುವ ಪಾರ್ಕ್‌ಗಳ (ಉದ್ಯಾನವನ) ರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಸಾರ್ವಜನಿಕರು ವಹಿಸಿಕೊಂಡರೆ, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸಹಕಾರವನ್ನು ನೀಡಲು ನಗರ ಪಾಲಿಕೆ ಸಿದ್ಧವಿದೆ ಎಂದು ತಿಳಿಸಿದರು.
ಅರಣ್ಯ ಉಪ ಸಂರಕ್ಷಣಾಧಿಕಾರಿ ಹರ್ಷವರ್ಧನ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು, ಸಾಮಾಜಿಕ ಉಪ ಸಂರಕ್ಷಣಾಧಿಕಾರಿ ನವೀನ್, ಸಹಾಯಕ ಸಂರಕ್ಷಣಾಧಿಕಾರಿ ವರದರಂಗನಾಥ್ ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಅರಣ್ಯ ಮತ್ತು ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಶಾಲಾ ವಿದ್ಯಾರ್ಥಿಗಳು ಮತ್ತು ತುಂಗಭದ್ರಾ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
































