ಬೆಂಗಳೂರು: ಮೊದಲ ಪತ್ನಿ ಜೀವಂತವಾಗಿರುವಾಗ ಅಥವಾ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ನಡೆಯುವ ಯಾವುದೇ ಎರಡನೇ ವಿವಾಹವು ಕಾನೂನುಬದ್ಧವಾಗಿ ಅಸಿಂಧುವಾಗಲಿದೆ (Void). ಇಂತಹ ಮದುವೆಗಳನ್ನು ರದ್ದುಪಡಿಸಲು ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ದಾವೆ ಹೂಡುವ ಅಗತ್ಯವೇ ಇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ತುಮಕೂರಿನ ಕೌಟುಂಬಿಕ ನ್ಯಾಯಾಲಯವು ವಿಚಾರಣೆ ನಡೆಸಿ, “ಪತಿಯ ಮೊದಲ ಪತ್ನಿ ಜೀವಂತವಾಗಿದ್ದಾಗಲೇ ಮದುವೆ ಅಸಿಂಧು” ಎಂದು ಒಪ್ಪಿಕೊಂಡಿತ್ತು. ಆದರೆ, ವಿಚ್ಛೇದನ ಅರ್ಜಿಗಳು ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ತಿಳಿಸಿ, ಮದುವೆ ರದ್ದತಿಗಾಗಿ ಅರ್ಜಿದಾರರು ಪ್ರತ್ಯೇಕ ಸಿವಿಲ್ ಪ್ರಕರಣ ದಾಖಲಿಸಬಹುದು ಎಂದು ಕೌಟುಂಬಿಕ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮತ್ತು ತಮಗೆ ನ್ಯಾಯ ಕೊಡಿಸುವಂತೆ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ನಿರ್ದೇಶನವನ್ನು ತಳ್ಳಿಹಾಕಿ, ಪ್ರತ್ಯೇಕ ದಾವೆಯ ಅಗತ್ಯವಿಲ್ಲದೇ ಇಂತಹ ಮದುವೆಗಳು ಸ್ವಯಂಚಾಲಿತವಾಗಿ ಅಸಿಂಧುಗೊಳ್ಳುತ್ತವೆ ಎಂದು ಆದೇಶಿಸಿದೆ.

































