ಚಿತ್ರದುರ್ಗ: ಭಾರತೀಯ ಸೇನೆ ಹಾಗೂ ಒಡಿಶಾದ ಭುವನೇಶ್ವರದಲ್ಲಿರುವ ‘ಕಳಿಂಗ ಇನ್‍ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ’ (ಕೆ.ಐ.ಐ.ಟಿ) ಸಂಸ್ಥೆಗಳ ನಡುವಿನ ಒಪ್ಪಂದದನ್ವಯ 2026-27ನೇ ಸಾಲಿನ ತಾಂತ್ರಿಕ ಮತ್ತು ವೈದ್ಯಕೀಯ ಪದವಿ ವಿದ್ಯಾಭ್ಯಾಸಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೈನಿಕರು, ಮಾಜಿ ಸೈನಿಕರು ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಅವಲಂಬಿತರಿಗೆ ಈ ವಿಶೇಷ ಶೈಕ್ಷಣಿಕ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಿಂದ 2030-31ರ ವರೆಗಿನ ಐದು ಶೈಕ್ಷಣಿಕ ವರ್ಷಗಳ ಅವಧಿಗೆ ಈ ಒಪ್ಪಂದ ಅನ್ವಯಿಸಲಿದೆ.
ಈ ಯೋಜನೆಯಡಿ ಟ್ಯೂಷನ್ ಫೀಸ್‍ನಲ್ಲಿ 10 ಪ್ರತಿಶತ ವಿದ್ಯಾರ್ಥಿವೇತನದೊಂದಿಗೆ 2 ಎಂ.ಬಿ.ಬಿ.ಎಸ್, 5 ಬಿ.ಡಿ.ಎಸ್ (ದಂತ ವೈದ್ಯಕೀಯ) ಮತ್ತು 5 ಬಿ.ಎಸ್ಸಿ ನಸಿರ್ಂಗ್ ಸೀಟುಗಳನ್ನು ಕಾಯ್ದಿರಿಸಲಾಗಿದೆ. ಹಾಗೆಯೇ 50 ಪ್ರತಿಶತ ವಿದ್ಯಾರ್ಥಿವೇತನದೊಂದಿಗೆ 4 ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಸೀಟುಗಳು ಲಭ್ಯವಿವೆ. ಇವುಗಳನ್ನು ಹೊರತುಪಡಿಸಿ ಕೆ.ಐ.ಐ.ಟಿ ಸಂಸ್ಥೆಯಲ್ಲಿ ಲಭ್ಯವಿರುವ ಇತರ ಕೋರ್ಸ್‍ಗಳಿಗೆ ಎಷ್ಟು ಸಂಖ್ಯೆಯಲ್ಲಾದರೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸೈನಿಕ, ಮಾಜಿ ಸೈನಿಕ ಅವಲಂಬಿತರಿಂದ ವೈದ್ಯಕೀಯ/ದಂತ ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾಭ್ಯಾಸಗಳಿಗೆ ಎಷ್ಟು ಅರ್ಜಿಗಳು ಸ್ವೀಕೃತಗೊಳ್ಳುತ್ತವೆಯೆಂಬುದರ ಮೇರೆಗೆ ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ಅವಲಂಬಿತರುಗಳ ಟ್ಯೂಷನ್ ಫೀಯಲ್ಲಿ ಗರಿಷ್ಟ 5 ಸೀಟುಗಳಿಗೆ 100 ಪ್ರತಿಶತ ವಿನಾಯಿತಿ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಜಾಲತಾಣ “kiit.ac.in” ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.































