ಹಾಸನ: ಬಗರ್ ಹುಕುಂ ಜಮೀನನ್ನು ಅಕ್ರಮವಾಗಿ ಮಂಜೂರಾತಿ ಮಾಡಿದ ಆರೋಪದಲ್ಲಿ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೇಲೂರು ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರಾಗಿದ್ದ ವೇಳೆ 2016 ರಿಂದ 2022ರ ನಡುವೆ ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್ ಕುಮಾರ್ ದಾಖಲಿಸಿದ್ದ ದೂರಿನ ಮೇರೆಗೆ ಸಿಐಡಿ ಅಧಿಕಾರಿಗಳು, ಹಳೇಬೀಡಿನ ಅವರ ನಿವಾಸದಲ್ಲೇ ಸಿಐಡಿ ಅಧಿಕಾರಿಗಳು ಲಿಂಗೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್ ನಿಂದ 2018ರಲ್ಲಿ ಗೆದ್ದು ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್, ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾಗಿದ್ದರು. ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್ ಕುಮಾರ್ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬೇಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತಿರಿಸಲಾಗಿತ್ತು.
ದೂರಿನಲ್ಲಿ ಸುಮಾರು 2750 ಎಕರೆ ಸರ್ಕಾರಿ ಜಮೀನನನ್ನು ನಕಲಿ ದಾಖಲೆಗಳ ಆಧಾರದ ಮೇಲೆ 1430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಇತರರ ವಿರುದ್ಧ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರದ ಬಂಧನ ಭೀತಿ ಎದುರಾಗುತ್ತಿದ್ದಂತೆಯೇ ಲಿಂಗೇಶ್ ಹಾಗೂ ಇತರರು ಅವರು ತಮ್ಮ ವಿರುದ್ಧ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಸಿಐಡಿ ಪೊಲೀಸರು ಲಿಂಗೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
































