ಬೆಂಗಳೂರು: ಬಸವನಗುಡಿಯಲ್ಲಿನ ಬಿ ಪಿ ವಾಡಿಯ ರಸ್ತೆಯ ವಾಡಿಯಾ ಕಲಾ ಗ್ಯಾಲರಿಯಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಹಭಾಗಿತ್ವದಲ್ಲಿ ಕನ್ನಡ ವ್ಯಂಗ್ಯಚಿತ್ರೋತ್ಸವ ಆಯೋಜಿಸಿದ್ದಾರೆ.
ನವೆಂಬರ್ 20 ರಂದು ನಾಡಿನ ಹೆಸರಾಂತ ಹಿರಿಯ ಕಲಾವಿದರಾದ ಭಾಸ್ಕರ ರಾವ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರಿಗೆ ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರರಾದ ಗುಜ್ಜಾರಪ್ಪ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರಾದ ವೈ ಎಸ್ ನಂಜುಂಡಸ್ವಾಮಿ, ಉಪಾಧ್ಯಕ್ಷರಾದ ಬಾಬು ಜತ್ತಕರ್, ಕಾರ್ಯದರ್ಶಿಗಳಾದ ಜಿ ಎಸ್ ನಾಗನಾಥ್, ಸಂಘದ ಖಜಾಂಚಿ ಎಚ್ಚೆಸ್ ವಿಶ್ವನಾಥ್, ಹಿರಿಯ ವ್ಯಂಗ್ಯಚಿತ್ರಕಾರರಾದ ಜೆ ಬಾಲಕೃಷ್ಣ, ರಘುಪತಿ ಶೃಂಗೇರಿ, ಶ್ರೀಧರ್ ಕೋಮರವಳ್ಳಿ, ದಯಾನಂದ ಕೊರ್ಲಕುಂಟೆ, ವಿನೋದ್ ಆಚಾರ್ಯ, ಕಲಾವಿದ ರಾ ಸೂರಿ ಹಾಗೂ ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ, ಸಂಘದ ಮಾಜಿ ಅಧ್ಯಕ್ಷರಾದ ವಿಆರ್ಸಿ ಶೇಖರ್ ಹಾಗೂ ಸಂಘದ ಸದಸ್ಯರು ಜೊತೆಯಾದರು. ನಂತರದಲ್ಲಿ ನಾಡಗೀತೆ ಹಾಡಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರೂ, ಚಿತ್ರಕಲಾವಿದರೂ, ಸಂಗೀತಗಾರರೂ, ಸಾಹಿತಿಗಳೂ ಹಾಗೂ ವ್ಯಂಗ್ಯಚಿತ್ರಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದು ಕನ್ನಡ ನಾಡಿನ ಸಾಂಸ್ಕೃತಿಕ ಸಮಾಗಮದಂತೆ ಕಾಣುತಿತ್ತು.
ಕನ್ನಡದ ವೈವಿಧ್ಯಮಯವಾದ ವ್ಯಂಗ್ಯಚಿತ್ರಗಳನ್ನು ನೋಡಲು ಬನ್ನಿ. ಕನ್ನಡದಲ್ಲೇ ನಗಲು ಇಚ್ಛಿಸುವವರು ದಯಮಾಡಿ ಬನ್ನಿ. ನವೆಂಬರ್ 22 ರ ಭಾನುವಾರ ಸಂಜೆ 6.00 ರವರೆಗೆ ನೋಡುಗರ ವೀಕ್ಷಣೆಗೆ ತೆರೆದಿರುತ್ತದೆ.